ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ಜೋಡಿ ಕವಿತಾ ಹಾಗೂ ರಮೇಶ, ಭಾನುವಾರ ಬೆಳಿಗ್ಗೆ ಬಾಳೆಖಾನ್ ಎಸ್ಟೇಟ್ ನ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಗಾಗಿ ಕಾಯುತ್ತಾ ನಿಂತಿದ್ದರು.

ವಾರವಿಡೀ ಎಸ್ಟೇಟ್ ನಲ್ಲಿ ಕೆಲಸ ಮಾಡಿ ಭಾನುವಾರದ ಸಂತೆಗಾಗಿ ಸುತ್ತೂರು ಪೇಟೆಗೆ ಹೋಗಲು ಅಲ್ಲಿನ ಜನರಿಗೆ ಇದ್ದ ಒಂದೇ ವ್ಯವಸ್ಥೆ ಎಂದರೆ ಅದು ಸಹಕಾರ ಸಾರಿಗೆ ಬಸ್.
ಈ ಬಸ್ಸು ಅಲ್ಲಿನ ಜನರ ಸುಖ-ದುಃಖಗಳಲ್ಲಿ ಪಾಲು ಪಡೆದಿತ್ತು. ಮದುವೆಗೆ, ಅನಾರೋಗ್ಯದವರನ್ನು ಆಸ್ಪತ್ರೆಗೆ ಸೇರಿಸಲು ಹೀಗೆ ಎಲ್ಲದಕ್ಕೂ ಈ ಬಸ್ಸನ್ನೇ ಅವಲಂಬಿಸಿದ್ದರು.

ಮೆಲ್ಲನೆ ಕೀರಲು ಸದ್ದು ಮಾಡುತ್ತಾ ಒಂದು ಹಳೆಯ ಬಸ್ಸು ಬಂದು ನಿಂತಿತು. ಕವಿತಾ ಬೇಗನೆ ಬಸ್ ಹತ್ತಿ ಕಿಟಕಿಯ ಪಕ್ಕದ ಒಂದು ಸೀಟಿನಲ್ಲಿ ಕುಳಿತಳು ರಮೇಶನೂ ಅವಳನ್ನೇ ಹಿಂಬಾಲಿಸಿ ಅವಳ ಪಕ್ಕದಲ್ಲಿ ಕುಳಿತ. ಡ್ರೈವರ್ ರಾಮಣ್ಣ ಇವರತ್ತ ಸಣ್ಣ ನಗೆ ಚೆಲ್ಲಿದ್ದ ಬಸ್ ಮೆಲ್ಲನೆ ಮುಂದೆ ಸಾಗಿತು.

ಕವಿತಾ ಕಿಟಕಿಯ ಹೊರಗೆ ತನ್ನ ದಿಕ್ಕಿನ ವಿರುದ್ಧ ದಿಕ್ಕಿಗೆ ಚಲಿಸುತ್ತಿದ್ದ ಕಾಫಿಯ ತೋಟವನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅವಳ ಸ್ಮೃತಿ ಪಟಲದಲ್ಲಿ ಹಲವಾರು ಯೋಚನಾ ಲಹರಿಗಳೆ ಓಡಾಡುತ್ತಿದ್ದರು ಅವಳ ಗಮನ ಆ ಒಂದು ವಿಷಯದ ಮೇಲೆ ಹೆಚ್ಚು ಕೇಂದ್ರೀಕೃತವಾಗುತ್ತಿತ್ತು.

ಬ್ರಿಟೀಷರ ಕಾಲದ ಒಂದು ಸುಂದರವಾದ ಕಾಫಿ ಎಸ್ಟೇಟ್, ಸುತ್ತಲೂ ಬೆಟ್ಟ ಗುಡ್ಡಗಳು ಎತ್ತಿಂದೆತ್ತ ಕಣ್ಣು ಹಾಯಿಸಿದರು ಬರೀ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಕಾಫಿಯ ತೋಟವೇ ಕಾಣುತ್ತಿತ್ತು. ಪ್ರಕೃತಿ ಸ್ವರೂಪವೇ ಹಾಗೆ ತನ್ನೊಡಲಲ್ಲಿ ಎಷ್ಟೇ ವಿಸ್ಮಯಗಳಿದ್ದರೂ ಕಣ್ಣಿಗೆ ಮಾತ್ರ ಆಕರ್ಷಕವಾಗಿಯೇ ಕಾಣುತ್ತದೆ.
ಬಾಳೆಖಾನ್ ಎಂಬ ಈ ಎಸ್ಟೇಟ್ ಗೆ ಕವಿತಾಳ ತಂದೆ-ತಾಯಿ 20 ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ತೀರ ಬಡತನದ ಕುಟುಂಬವಾಗಿದ್ದರಿಂದ ಕವಿತಾ ಓದಲು ಆಗಲಿಲ್ಲ ಆದರೆ ತುಂಬಾ ಚುರುಕು ಬುದ್ಧಿವಳಾದ ಇವಳು ತಂದೆ ತಾಯಿಯಂತೆ ಕೆಲಸದಲ್ಲಿ ನೈಪುಣ್ಯತೆ ಹೊಂದಿ ಈ ಎಸ್ಟೇಟ್ ನಲ್ಲಿ ಬೆಳೆದಿದ್ದಳು.

ಆಗ ಕವಿತಾಳಿಗೆ ಸುಮಾರು 20 ವರ್ಷ ತಂದೆಯೊಂದಿಗೆ ಬಸ್ಸಿನಲ್ಲಿ ಸುತ್ತೂರು ಪೇಟೆಗೆ ಹೋಗುವಾಗ ಬಸ್ಸಿನಲ್ಲಿದ್ದ ತೆಳ್ಳಗೆ ಬೆಳ್ಳಗೆ ಚಿಗುರು ಮೀಸೆಯ ಒಬ್ಬ ಯುವಕನನ್ನು ನೋಡಿದಳು ಅವನು ಇವಳನ್ನೇ ನೋಡುತ್ತಿದ್ದ ಕಣ್ಣ ಸನ್ನೆಯ ಆರಕ್ಷಣದಲ್ಲೇ ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಈ ಪ್ರೇಮ ಪ್ರಸಂಗ ಸುಮಾರು ತಿಂಗಳುಗಳ ಕಾಲ ನಡೆಯದಿತ್ತು. ಪ್ರತಿ ಭಾನುವಾರ ಇವರಿಬ್ಬರ ಈ ಪ್ರೀತಿಗೆ ಬಸ್ಸು ಸಾಕ್ಷಿಯಾಗಿತ್ತು.

“ದೂರ ಸುತ್ತೂರು ಸಂತೆಗಾ”

ಎನ್ನುತ್ತಾ ಕಂಡಕ್ಟರ್ ಗೋಪಾಲ ಟಿಕೆಟ್ಗಾಗಿ ಕೈ ಚಾಚಿದ, ಯಾವುದೋ ಲೋಕದಲ್ಲಿದ್ದ ಕವಿತಾ ತಕ್ಷಣ ವಾಸ್ತವಕ್ಕೆ ಬಂದು ಗೋಪಾಲನತ್ತ ನೋಡಿ ಹೌದು ಎನ್ನುವಂತೆ ತಲೆ ಆಡಿಸಿದಳು. ರಮೇಶ ಟಿಕೆಟ್ನ ಹಣ ಗೋಪಾಲನ ಕೈಗೆ ಕೊಡುತ್ತಿದ್ದಂತೆ ಗೋಪಾಲ ಟಿಕೆಟ್ ಕೊಟ್ಟು ಮುಂದೆ ಸಾಗಿದೆ.

ಮತ್ತೆ ಕವಿತಾ ಕಿಟಕಿಯವರೆಗೆ ನೋಡುತ್ತಾ ಕುಳಿತಳು. ಕವಿತಾಳ ತಂದೆ ಅದೇ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಂಬಂಧಿಕರ ಹುಡುಗ ರಮೇಶನ ಜೊತೆ ಕವಿತಾಳ ಮದುವೆ ನಿಶ್ಚಯಿಸಿದಾಗ ತಂದೆಯ ಮಾತನ್ನು ಮೀರಲು ಸಾಧ್ಯವಾಗದೆ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಕವಿತಾ ರಮೇಶನನ್ನು ಮದುವೆಯಾಗಿದ್ದಾಳು. ರಮೇಶ ಕೂಡ ಕವಿತಾಳನ್ನು ತುಂಬಾ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದ

“ಪಾಲಿಗೆ ಬಂದದ್ದನ್ನು ಅನುಭವಿಸುವುದೇ ಜೀವನ”
ಅಂದುಕೊಳ್ಳುತ್ತಾ ಕವಿತಾ ರಮೇಶನ ಕೈಯನ್ನು ಗಟ್ಟಿಯಾಗಿ ಹಿಡಿದಳು, ಇದ್ಯಾವುದರ ಅರಿವೆ ಇಲ್ಲದ ರಮೇಶ ಅವಳತ್ತ ನೋಡಿ ನಕ್ಕಿದ್ದ.

ಅದಾಗಲೇ ಬಸ್ಸು ಗಂಗೆಗಿರಿ ಎಂಬ ಇನ್ನೊಂದು ಎಸ್ಟೇಟ್ ತಲುಪಿತ್ತು. ಬಸ್ಟ್ಯಾಂಡಿನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ರಮೇಶನನ್ನೇ ದಿಟ್ಟಿಸಿ ನೋಡುತ್ತಿದ್ದ. ದೈತ್ಯಾಕಾರದ ದೇಹ ಉದ್ದನೆಯ ಗಡ್ಡ ಬೀಡಿ ಸೇದುತ್ತಾ ಕುಳಿತಿದ್ದ ವ್ಯಕ್ತಿ ಬಸ್ ಹೊರಡುತ್ತಿದ್ದಂತೆ ತಟ್ಟನೆ ಬೀಡಿಯನ್ನು ಎಸೆದು ಬಸ್ ಹತ್ತಿಕೊಂಡು ರಮೇಶ ಕುಣಿತ ಸೀಟಿನ ಬಲಬದಿಯ ಒಂದು ಸೀಟಿನಲ್ಲಿ ಕುಳಿತ. ಕಣ್ಣುಗುಡ್ಡೆ ಸ್ವಲ್ಪವೂ ಅಲುಗಾಡಿಸದಂತೆ ರಮೇಶನನ್ನೇ ನೋಡುತ್ತಿದ್ದ ಆ ವ್ಯಕ್ತಿ.

ಕವಿತಾಳಿಗೆ ಯಾವುದೋ ಅಪಾಯದ ಮುನ್ಸೂಚನೆಯ ಅರಿವಾಗಿ ಮೆಲ್ಲನೆ ಆ ವ್ಯಕ್ತಿಯ ಕಡೆಗೆ ನೋಡಿದಳು. ಅವನೋ ಇವರನ್ನೇ ತಿನ್ನುವಂತೆ ನೋಡುತ್ತಿದ್ದ.

” ಏನ್ರೀ.. ಯಾರ್ ಅವ್ನು, ಅವಗಿಂದ ನಮ್ಮನ್ನೇ ತಿನ್ನೋ ತರ ನೋಡ್ತಿದಾನೆ”ಅಂದಳು ಕವಿತಾ

ರಮೇಶ ಕತ್ತು ತಿರುಗಿಸದೆ ಅವಳ ಕಡೆಗೆ ನೋಡುತ್ತಾ

” ಅವನಾ, ನನ್ನ ದೂರದ ಸಂಬಂಧಿ ಅವ್ನ ಮಗಳನ್ನ ನಂಗೇ ಕೊಡಬೇಕು ಅಂತ ಇದ್ದ, ನಾನು ನಿನ್ನ ಮದ್ವೆ ಅದ್ನಲ್ಲ ಆ ಕೋಪಕ್ಕೆ ಹಾಂಗೆ ನೋಡ್ತಿದನೆ ಅಷ್ಟೇ” ಎಂದ ತಮಾಷೆಯ ಧ್ವನಿಯಲ್ಲಿ.

ಕವಿತಾಳಿಗೆ ರಮೇಶನ ಮಾತಿನಲ್ಲಿ ಯಾವ ಸತ್ಯವೂ ಇಲ್ಲ ಎಂದು ಅವನ ಮಾತಿನ ದಾಟಿಯಲ್ಲಿ ತಿಳಿಯಿತು. ಆದರೆ ಅವಳಿಗೆ ಆ ವ್ಯಕ್ತಿಯ ಮೇಲೆ ಸಣ್ಣಗೆ ಭಯ ಹುಟ್ಟಿಕೊಂಡಿತ್ತು. ಓರೆ ಕಣ್ಣಿನಲ್ಲಿ ಅವನ ತಲೆ ನೋಡುತ್ತಿದ್ದಳು ಅವಳ ತಲೆಯಲ್ಲಿ ಹಲವಾರು ಯೋಜನೆಗಳು ಸುಳಿದಾಡಿದವು.

” ಯಾರ್ ಇವ್ನು ನಮ್ಮನ್ನೇ ಯಾಕೆ ಹಾಗೆ ನೋಡ್ತಾನೆ. ಇವ್ನಿಂದ ಏನಾದ್ರು ನಮಗೆ ತೊಂದ್ರೆ ಆಗ್ಬೋದ”
ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳುತ್ತಾ ಕುಳಿತಿದ್ದ ಕವಿತಾಳಿಗೆ ಬಸ್ಸೊಂದು ಬೋನಿನ ಪ್ರೀತಿಯಲ್ಲಿ ಕಾಣುತ್ತಿತ್ತು. ಆದರೆ ರಮೇಶ ಮಾತ್ರ ಒಂದು ಕೈಯಲ್ಲಿ ಕವಿತಾಳ ಕೈಹಿಡಿದು, ಇನ್ನೊಂದು ಕೈಯಲ್ಲಿ ಬ್ಯಾಗ್ ಒಂದನ್ನು ಹಿಡಿದುಕೊಂಡು ತಣ್ಣಗೆ ಕುಳಿತಿದ್ದ.

ತಿಂಗಳು ಬೆಳಕಿನ ರಾತ್ರಿಯಲ್ಲಿ ಒಂದು ದಿನ, ನಾಡ ಬಂದೂಕನ್ನು ಹೆಗಲಿಗೆ ಹಾಕಿಕೊಂಡು ಹೆಡ್ ಲೈಟ್ ತಲೆಗೆ ಸಿಕ್ಕಿಸಿ ಗಂಗೆಗಿರಿಯ ತನ್ನ ಎಸ್ಟೇಟ್ ನ ಮನೆಯಿಂದ ಹೊರಟಿದ್ದ ರಾಜಪ್ಪ

ಶಿಕಾರಿವೊಂದು ಕಲೆ, ದಟ್ಟ ಕಾಡಿನ ಒಳಗೆ ಕಗ್ಗತ್ತಲಲ್ಲಿ ಮುಂದೆ ಎದುರಾಗಬಹುದಾದ ಅಪಾಯಕ್ಕೆ ಎದೆಯೊಡ್ಡಿ, ತನಗೆ ಬೇಕಾದ ಬೇಟೆಯನ್ನು ಹುಡುಕಿ, ನಿಶಬ್ದವಾಗಿ ಅದನ್ನು ಹಿಂಬಾಲಿಸಿ, ಬೇಟೆಯ ನೇರಕ್ಕೆ ಬಂದೂಕನ್ನು ಹಿಡಿದು ಓಡುತ್ತಿರುವ ಬೇಟೆಯ ಯಾವ ಭಾಗಕ್ಕೆ ಹೊಡೆದರೆ ಸಾಯಬಹುದು ಎಂದು ಅಂದಾಜು ಮಾಡಿ ಗುಂಡು ಹಾರಿಸುವ ಕಲೆ ಎಲ್ಲರಿಗೂ ದಕ್ಕುವುದಿಲ್ಲ. ಈ ಕಲೆಯಲ್ಲಿ ರಾಚಪ್ಪ ಪದವಿದಿದ್ದ.

ಬಾಳೆಖಾನ್ ಹಾಗೂ ಗಂಗೆಗಿರಿ ಎಸ್ಟೇಟ್ ಗಳು ಅಕ್ಕ ಪಕ್ಕದಲ್ಲಿ ಇದ್ದವು ಮುಳ್ಳಿನ ಬೇಲಿಯ ಗಡಿಯೊಂದು ಎರಡು ಎಸ್ಟೇಟ್ಗಳನ್ನು ಬೇರೆ ಮಾಡಿತ್ತು ಆದರೆ ಶಿಕಾರಿಗೆ ಯಾವ ಗಡಿಯೂ ಇರಲಿಲ್ಲ.

ರಾಚಪ್ಪ ಕಾಫಿಯ ತೋಟದ ಮಧ್ಯೆ ಸಾಗುತ್ತಾ ಸುಮಾರು ದೂರ ಬಂದಿದ್ದ. ಯಾವ ಪ್ರಾಣಿಯ ಸುಳಿವು ಇರಲಿಲ್ಲ. ನಡೆದು ನಡೆದು ಬಾಳೆಕನ್ ಗಡಿಯವರೆಗೂ ಬಂದಿದ್ದ. ನಿಶಬ್ದವಾದ ಪ್ರದೇಶ ಸಣ್ಣ ಕಡ್ಡಿ ತುಂಡಾದರು ಕೇಳಿಸುವಂತಿತ್ತು. ತುಂಬಾ ದೂರ ನಡೆದು ಬಂದರಿಂದ ರಾಚಪ್ಪನಿಗೆ ಸ್ವಲ್ಪ ಸುಧಾರಿಸಿಕೊಳ್ಳಬೇಕೆನಿಸಿ. ಅಲ್ಲೇ ಇದ್ದ ಕಾಫಿಯ ಗಿಡದ ಬುಡಕ್ಕೆ ಟಾರ್ಚ್ ಹಾಕಿ ನೋಡಿದ ಸರಿಯಾದ ಜಾಗ ಎಂದು ಖಾತ್ರಿ ಮಾಡಿಕೊಂಡ ಮೇಲೆ ಅಲ್ಲೇ ಕುಳಿತು ಬಿಡಿ ಹಚ್ಚಿದ್ದ ಸ್ವಲ್ಪ ಹೊತ್ತಿಗೆ,

“ಡಮಾರ್…….. ಎಂದು ಜೋರಾದ ಗುಂಡಿನ ಸದ್ದು ಬಾಳೆಕನ್ ಎಸ್ಟೇಟ್ ನ ಕಡೆಯಿಂದ ಬಂದಿತ್ತು

“ಥೂ ಬೇವಾರ್ಸಿಗಳು… ಇರೋ ಪ್ರಾಣಿ ಎಲ್ಲಾ ಓಡಿಸಿಬಿಟ್ರು ಇವತ್ತು ನನಗೆ ಶಿಕಾರಿ ಆದ ಹಾಗೆ”

ಎನ್ನುತ್ತ ಕುಳಿತಿದ್ದ ರಾಜಪ್ಪ ಅವನು ಬೈದದ್ದಕ್ಕೂ ಕಾರಣ ಇತ್ತು. ಆ ನಿಶಬ್ದದ ರಾತ್ರಿಯಲಿ ಗುಂಡಿನ ಶಬ್ದಕ್ಕೆ ಪ್ರಾಣಿಗಳು ಹೆದರಿ ತಮ್ಮ ಸುರಕ್ಷತೆಯ ತಾಣವನ್ನು ಸೇರಿಬಿಡುತ್ತಿದ್ದವು, ಮತ್ತೆ ಅವು ಸ್ವಾರ್ಥಿಗೆ ಬರಲು ಸುಮಾರು ಹೊತ್ತೆ ಹಿಡಿಯುತ್ತಿತ್ತು.

“ಇನ್ನೇನು ಇವತ್ತಿನ ಕಥೆ ಮುಗಿಯಿತು, ಸುಮ್ನೆ ತಿರುಗೋದಕ್ಕಿಂತ ಮನೆಗೆ ಹೋಗುವುದೇ ಒಳ್ಳೆಯದು”

ಎನ್ನುತ್ತ ರಾಜಪ್ಪ ಬಂದೂಕನ್ನು ಹೆಗಲಿಗೆ ಹಾಕಿಕೊಂಡ.
“ಸುಮ್ಮನೆ ಕೋವಿ ಲೋಡ್ ಮಾಡಿದ ಹಾಗಾಯಿತು”
ಎಂದು ಸಪ್ಪೆ ಮೊರೆ ಹಾಕಿಕೊಂಡು ಮನೆಯ ದಿಕ್ಕಿನಲ್ಲಿ ಐದಾರು ಹೆಜ್ಜೆ ಹಾಕಿದ್ದ. ಅಷ್ಟರಲ್ಲಿ ಬಾಳೆಖಾನ್ ಎಸ್ಟೇಟ್ ನ ದಿಕ್ಕಿನಿಂದ ಏನೋ ಸದ್ದಾದಂತಾಗಿ ಹೆಡ್ ಲೈಟ್ ಆಫ್ ಮಾಡಿ ಅಲ್ಲೇ ಸುಮ್ಮನೆ ಕುಳಿತ.

ಸರಸರ ನೇ ಶಬ್ದ ರಾಚ ಕುಳಿತಿದ್ದ ದಿಕ್ಕಿಗೆ ರಭಸವಾಗಿ ಬರುತ್ತಿತ್ತು. ಲೋಡ್ ಮಾಡಿದ ಕೋವಿಯನ್ನು ಶಬ್ದ ಬರುವ ದಿಕ್ಕಿಗೆ ಗುರಿಯಾಗಿಸಿ ಹಿಡಿದಿದ್ದ ರಾಚಪ್ಪ.

ಒಂದು ದೊಡ್ಡ ಗಾತ್ರದ ಹಂದಿ ಕಾಫಿಯ ತೋಟದ ತಗ್ಗಿನ ಕಡೆಗೆ ಓಡುತ್ತಿತ್ತು ಒಂದು ಕ್ಷಣವೂ ಹಿಂದೆ ಮುಂದೆ ನೋಡದೆ ರಾಚಪ್ಪ ಹಂದಿಯ ತಲೆಯ ಭಾಗಕ್ಕೆ ಗುರಿ ಮಾಡಿ ಹೊಡೆದ ಹಂದಿ ಮುಗ್ಗರಿಸಿ ಮೂರ್ನಾಲ್ಕು ಪಲ್ಟಿಯಾಗಿ ಬಿತ್ತು.

ಮೆಲ್ಲನೆ ರಾಚಪ್ಪ ಹಂದಿ ಬಿದ್ದ ಕಡೆಗೆ ಹೋದ ಬಾಳೆಕನ್ ತೋಟದ ಒಳಗೆ ಬಿದ್ದಿದ್ದ ಹಂದಿಯನ್ನು ಈ ಕಡೆ ತರುವುದು ಹೇಗೆ? ಎಂದು ಯೋಚಿಸುತ್ತಿದ್ದ.ಅಷ್ಟರಲ್ಲಿ ಅಲ್ಲಿಗೆ ಯಾರೋ ನಡೆದುಕೊಂಡು ಬರುತ್ತಿರುವ ಸದ್ದಾಯಿತು. ಹಂದಿಯನ್ನು ದಾಟಿಸಲು ಪ್ರಯತ್ನಿಸುತ್ತಿದ್ದ ಆದರೆ ಆ ದೈತ್ಯಾಕಾರದ ಹಂದಿಯನ್ನು ಒಬ್ಬನಿಂದ ಅಲ್ಲಾಡಿಸಲು ಆಗುತ್ತಿರಲಿಲ್ಲ. ಹಂದಿಯ ಹೃದಯ ಭಾಗದಲ್ಲಿ ರಕ್ತ ಸೋರುತ್ತಿರುವುದನ್ನು ನೋಡಿದ ರಾಚಪ್ಪ

“ನಾನು ಹೊಡೆದದ್ದು ತಲೆಗೆ ಇದೇನು?”ಎಂದು ಅಲ್ಲಿ ಮುಟ್ಟಿ ನೋಡಿದಾಗ ಹಂದಿಗೆ ಈ ಮೊದಲೇ ಒಂದು ಗುಂಡು ಬಿದ್ದದ್ದನ್ನು ಖಾತ್ರಿ ಮಾಡಿಕೊಂಡ ರಾಚಪ್ಪ.

“ಆ ಬಡ್ಡಿ ಮಕ್ಳು ಹೊಡೆದಿರೋ ಹಂದಿ ಇದೆ ಇರಬೇಕು”

ಎನ್ನುತ್ತಾ ಕುಳಿತಿದ್ದ ರಾಚಪ್ಪ, ಹೆಜ್ಜೆ ಸಪ್ಪಳ ತುಂಬಾ ಹತ್ತಿರಕ್ಕೆ ಬರುತ್ತಿತ್ತು ಒಮ್ಮೆಲೇ ರಾಚಪ್ಪನ ಮುಖಕ್ಕೆ ಟಾರ್ಚ್ ಬೆಳಕು ಬಿತ್ತು. ರಾಚಪ್ಪ ಆ ಕಡೆಗೆ ತಿರುಗಿ ನೋಡಿದ.

ರಮೇಶ ಕೈಯಲ್ಲಿ ಕೋವಿ ಹಿಡಿದು ನಿಂತಿದ್ದ ಸ್ವಲ್ಪದರಲ್ಲೇ ಅವನ ಹಿಂದೆ ಮೂವರು ಬಂದು ನಿಂತರು. ರಕ್ತದ ಜಾಡು ಹಾಗೂ ರಾಚಪ್ಪ ಹೊಡೆದ ಗುಂಡಿನ ಸದ್ದಿನ ದಿಕ್ಕಿಗೆ ರಮೇಶ ಹಾಗೂ ಜೊತೆಗಾರರು ಬಂದಿದ್ದರು.

“ಅದು ನಾವು ಹೊಡೆದಿರೋ ಬೇಟೆ”
ರಮೇಶ ರಾಚಪ್ಪನನ್ನೇ ನೋಡುತ್ತಾ ಸ್ವಲ್ಪ ಗಡಸು ಧ್ವನಿಯಲ್ಲಿ ಹೇಳಿದ

“ಅದೆಂಗ್ ಆಗುತ್ತೆ ಹೊಡ್ದು ಬೀಳ್ಸಿರೋನು ನಾನು, ನಂದೇ ಈ ಬೇಟೆ.”
ಅಂದ ರಾಚಪ್ಪ.

ಶಿಕಾರಿಯಲ್ಲಿ ಕೆಲವೊಮ್ಮೆ ಹೀಗಾಗುವುದು ಸಹಜ ಒಂದೇ ಬೇಟೆಗೆ ಎರಡು ಕಡೆಯವರ ಗುಂಡು ತಾಗಿದಾಗ ಇಬ್ಬರೂ ಮಾಂಸದ ಪಾಲಿನಲ್ಲಿ ಸರಿ ಹೊಂದಿಸಿ ಕೊಳ್ಳುತ್ತಿದ್ದರು ಆದರೆ ಇಲ್ಲಿ ರಮೇಶನಿಗೆ ಪಾಲಿನಲ್ಲಿ ರಾಚಪ್ಪನನ್ನು ಸೇರಿಸಿಕೊಳ್ಳುವ ಉಮೆದು ಇರಲಿಲ್ಲ.

“ನಮ್ ಎಸ್ಟೇಟ್ ಗೆ ಬಂದು ಗಂಧ ಕದಿಯೋ ಬೊಳಿ ಮಗ ನೀನು, ನಿನಗೇನೋ ಕೆಲಸ ನಮ್ಮ ಎಸ್ಟೇಟ್ ನಲ್ಲಿ ಹಿಡಿದು ಕೊಡ್ಲಾ ಗಂಧಕದಿಯೋಕೆ ಬಂದಿದ್ದಾನೆ ಅಂತ”
ಇಂದು ರಮೇಶ ಜೋರಾಗಿ ದಪಾಯಿಸಿದ.

ರಾಚಪ್ಪನದೋ ಒಂದೆರಡು ದುರ್ಬುದ್ಧಿಯಲ್ಲ ಸರ್ವಚಟಗಳ ರಾಜನಂತಿದ್ದ, ರಾಚಪ್ಪ ಒಮ್ಮೆ ಬಾಳೆ ಖಾನ್ ಎಸ್ಟೇಟ್ ನಲ್ಲಿ ಗಂಧ ಕದಿಯುವಾಗ ಸಿಕ್ಕಿಬಿದ್ದು ಪೆಟ್ಟು ತಿಂದಿದ್ದರೂ ಆ ಕೆಲಸ ಬಿಟ್ಟಿರಲಿಲ್ಲ ಹೀಗಾಗಿ ಊರಿನಲ್ಲಿ ಅವನಿಗೆ ಯಾವ ಮರ್ಯಾದೆಯೂ ಇರಲಿಲ್ಲ.

“ಜಾಸ್ತಿ ಮಾತಾಡಬೇಡ ಬೀಳ್ಸಿರೋದ್ ನಾನು ಬೇಟೆ ನಂದು ಅಷ್ಟೇ”
ಎಂದ ರಾಚಪ್ಪ.

“ಎಲಾ ಬಡ್ಡಿಮಗನೆ ಒಳ್ಳೆ ಮಾತಲ್ಲಿ ಹೇಳಿದ್ರೆ ಕೇಳಲ್ಲ ಅಲ್ವಾ ನೀನು”
ಎಂದು ರಾಚಪ್ಪನಿಗೆ ಹೊಡೆದ,
ರಾಚಪ್ಪನು ತಿರುಗಿಸಿ ಹೊಡೆಯಲು ಕೈಯೆತ್ತಿದಾಗ ರಮೇಶನ ಹಿಂದೆ ನಿಂತಿದ್ದ ಮೂವರು ಸೇರಿ ರಾಚಪ್ಪನಿಗೆ ನಾಲ್ಕು ಬಾರಿಸಿ ಅಲ್ಲಿಂದ ಓಡಿಸಿದ್ದರು.

ಪೆಟ್ಟು ತಿಂದ ಹುಲಿಯಂತಾಗಿದ್ದ ರಾಚಪ್ಪ,
“ಬಡ್ಡಿ ಮಕ್ಳ ನೋಡ್ಕೋತೀನಿ ನಿಮ್ಮನ್ನ ಎಲ್ಲೊಗ್ತೀರಾ ಬರಲೇಬೇಕು ನಮ್ಮೂರ್ ಕಡೆ”ಎನ್ನುತ್ತಾ ಅಲ್ಲಿಂದ ಹೊರಟ.

ಪಾಲಾದರೂ ಕೊಡಬಹುದಿತ್ತು ಹೊಡೆದು ಕಳಿಸಿದ್ನಲ್ಲ ಅನ್ನುತ್ತಾ ಮನೆ ಕಡೆ ಹೆಜ್ಜೆ ಹಾಕಿದ್ದ. ಬಸ್ ಓಡಾಡುವ ಮಣ್ಣಿನ ಮುಖ್ಯ ರಸ್ತೆಗೆ ಬಂದು ದಾರಿಯ ಪಕ್ಕದಲ್ಲಿ ಇದ್ದ ಒಂದು ಕಲ್ಲಿನ ಮೇಲೆ ಕುಳಿತು ಬೀಡಿ ಹಚ್ಚಿದ್ದ ಅವನ ಕಣ್ಣುಗಳು ಕೋಪದ ತಾಪಕೆ ಕೆಂಪಾಗಿದ್ದವು.

“ಇದೇ ದಾರಿಲೇ ತಾನೆ ಓಡಾಡಬೇಕು ಸಿಕ್ತಾರೆ ಎಲ್ಲೋಗ್ತಾರೆ”
ಎಂದು ಕಿಡಿಕಿಡಿ ಹಲ್ಲು ಕಡಿಯುತ್ತಾ ಮನೆ ಕಡೆ ಹೊರಟಿದ್ದ.

ರಾಚಪ್ಪ ರಮೇಶ ಹಾಗೂ ಕವಿತಾರನ್ನೆ ಕೆಂಗಣ್ಣಿನಿಂದ ನೋಡುತ್ತಿದ್ದ. ರಮೇಶ ಒಮ್ಮೆ ತಿರುಗಿ ರಾಚಪ್ಪನ ಕಡೆ ನೋಡಿದ ರಮೇಶನ ಕಣ್ಣಿನಲ್ಲಿ ಯಾವ ಭಯವು ಇರಲಿಲ್ಲ ಬಸ್ಸು ಶಾಂತವಾಗಿ ಮುಂದೆ ಚಲಿಸುತ್ತಿತ್ತು.

ಕವಿತಾಳ್ಗೆ ಮಾತ್ರ ತಮ್ಮ ಸುತ್ತ ಏನೋ ಒಂದು ಘಟನೆ ನಡೆಯುವ ಭೀತಿ ಹುಟ್ಟಿಕೊಂಡಿತ್ತು.

ರಾಚಪ್ಪನ ದೃಷ್ಟಿ ರಮೇಶ ಹಿಡಿದಿದ್ದ ಬ್ಯಾಂಕ್ ನ ಕಡೆಗೆ ಹರಿದಿತ್ತು.

ರಾಚಪ್ಪನ ಮನಸ್ಸಿನಲ್ಲಿ ಮತ್ತೇನೋ ಒಂದು ಘಟನೆ ನೆನಪಾಯಿತು.

ಮೂರು ದಿನಗಳ ಹಿಂದಿನ ಒಂದು ರಾತ್ರಿ ರಾಜಪ್ಪ ಹಾಗೂ ಇಬ್ಬರು ಸೇರಿ ಬಾಳೆ ಖಾನ್ ಎಸ್ಟೇಟ್ ನ ಕಾಫಿ ತೋಟದಲ್ಲಿ ಒಂದು ಗಂಧದ ಮರವನ್ನು ಕಡಿದು ಮರ ಅಲ್ಲಿತ್ತು ಎಂಬುದಕ್ಕೆ ಸ್ವಲ್ಪವೂ ಸುಳಿವು ಸಿಗದಂತೆ ಮಾಡಿದ್ದರು. ಕೊಯ್ದ ಮರವನ್ನು ಡ್ರೆಸ್ಸಿಂಗ್ ಮಾಡಿದಾಗ 15 ಕೆಜಿ ಶ್ರೀಗಂಧದ ತಿರುಳು ಸಿಕ್ಕಿತ್ತು.

ಅಷ್ಟು ಹೊತ್ತಿಗಾಗಲೇ ಶಿಕಾರಿಗೆ ಹೋದವರ ಹೆಡ್ ಲೈಟ್ನ ಬೆಳಕು ಇವರತ್ತ ಬರುವುದನ್ನು ಗಮನಿಸಿ ಆ ತಿರುಳನ್ನು ತೋಟದ ಮಧ್ಯದಲ್ಲಿ ನೀರು ಇಂಗಿಸಲು ಮಾಡಿದ್ದ ಸಣ್ಣ ತೊಟ್ಟಿಲು ಗುಂಡಿಯಲ್ಲಿ ಹಾಕಿ ಮುಚ್ಚಿದ್ದರು. ತೋಟದ ತುಂಬೆಲ್ಲ ಕಳೆ ಬೆಳೆದಿದ್ದರಿಂದ ಅದನ್ನು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ.

ರಮೇಶ ಕೋವಿಯನ್ನು ಬೆನ್ನಿಗೆ ನೇತು ಹಾಕಿಕೊಂಡು ಇವರಿದ್ದ ಸ್ವಲ್ಪ ದೂರದಲ್ಲೇ ಹೋಗುತ್ತಿರುವುದನ್ನು ರಾಚಪ್ಪ ನೋಡಿದ್ದ.

ಮಾರನೆಯ ದಿನ ರಾತ್ರಿ ಅಲ್ಲಿ ಹೋಗಿ ನೋಡಿದರೆ ಇವರು ಬಚ್ಚಿಟ್ಟಿದ್ದ ಮಾಲು ಅಲ್ಲಿರಲಿಲ್ಲ. ಮೂರು ಜನರು ಮುಖಮುಖ ನೋಡಿಕೊಂಡಿದ್ದರು, ರಾಚಪ್ಪನಿಗೆ ರಮೇಶನ ಮೇಲಿದ್ದ ಅನುಮಾನ ಬಲವಾಯಿತು.

ರಾಚಪ್ಪನಿಗೆ ತನ್ನ ಎಲ್ಲಾ ಕೆಲಸಗಳಿಗೂ ವಿಘ್ನನಾಗಿದ್ದ ರಮೇಶನನ್ನು ಕಂಡು ಕೋಪ ನೆತ್ತಿಗೇರಿತ್ತು. ರಮೇಶ ಹಿಡಿದಿದ್ದ ಬ್ಯಾಂಕ್ ನಲ್ಲಿ ಏನಿದೆ ಎಂಬ ಕುತೂಹಲವು ಜಾಸ್ತಿಯಾಗಿತ್ತು. ತುಂಬಾ ಹೊತ್ತು ಅವರನ್ನೇ ನೋಡಿದರೆ ಇತರರಿಗೆ ನನ್ನ ಮೇಲೆ ಅನುಮಾನ ಬರಬಹುದೆಂದು ತಿಳಿದ ರಾಚಪ್ಪ ದೃಷ್ಟಿಯನ್ನು ಡ್ರೈವರ್ ರಾಮಣ್ಣನತ ಹರಿಸಿದ್ದ ರಾಮಣ್ಣನೂ ಇವನನ್ನೇ ರೇರ್ ಮಿರರ್ ನಲ್ಲಿ ನೋಡುತ್ತಿದ್ದ.

Gallery

Button align left

ಒಂದು ಹಳೆಯ, ಇನ್ನೊಂದು ನಾಲ್ಕು ವರ್ಷ ಓಡಿಸಿದರೆ ಮತ್ತೆ ಗುಜರಿಗೆ ಹಾಕಬೇಕಿತ್ತು ಹಾಗಿತ್ತು ಅದರ ಪರಿಸ್ಥಿತಿ. ಸುಮಾರು 17 ವರ್ಷಗಳಿಂದ ಬಾಳೆಖಾನ್ ಎಸ್ಟೇಟ್ನಿಂದ ಸುತ್ತೂರಿಗೆ ಅಲ್ಲಿಂದ ಮತ್ತೆ ಎಷ್ಟೇಟಿಗೆ ಸಾರಿಗೆ ಸಂಪರ್ಕ ಒದಗಿಸುತ್ತಿತ್ತು.

ರಾಮಣ್ಣ, ಬಸ್ ಇಲ್ಲಿಗೆ ಕೊಟ್ಟಾಗಿನಿಂದ ಇಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ರಾಮಣ್ಣ ಹಾಗೂ ಅವನ ಹೆಂಡತಿ ಸುಮಿತ್ರಮ್ಮ, ಬಾಳೆಖಾನ್ ಎಸ್ಟೇಟ್ ಗೆ ಬಂದು ನೆಲೆಸಿದ್ದರು. ಎಸ್ಟೇಟ್ ನ ಒಂದು ಮನೆ ರಾಮಣ್ಣನಿಗಾಗಿ ನೀಡಿದ್ದರು.

ಎಸ್ಟೇಟ್ ನ ಅಂಕುಡೊಂಕಿನ ಮಣ್ಣಿನ ದಾರಿಯಲ್ಲಿ ಬಸ್ ಚಲಾಯಿಸುವುದು ರಾಮಣ್ಣನಿಗೆ ನೀರು ಕುಡಿದಷ್ಟೇ ಸುಲಭವಾಗಿತ್ತು. ಹೇರ್ ಪಿನ್ ಬೆಂಡ್ ನ ರಸ್ತೆಯಲ್ಲಿ ಈ ಹಳೆಯ ಬಸ್ ಓಡಿಸುವುದು ಅಷ್ಟು ಸುಲಭದ ಮಾತಲ್ಲ, ಎಂತಹ ಗಾಳಿ ಮಳೆಗೂ ರಾಮಣ್ಣನ ಬಸ್ ನಿಲ್ಲುತ್ತಿರಲಿಲ್ಲ.

ರಾಮಣ್ಣನದು ಮೂಲತಃ ಬಯಲು ಸೀಮೆ. ಅಲ್ಲಿ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಇವನಿಗೆ ಸುಮಿತ್ರಮ್ಮನನ್ನು ಗಂಟು ಹಾಕಿದ್ದರು. ಸಂಸಾರದ ಜವಾಬ್ದಾರಿ ಹೆಚ್ಚಾಗಿತ್ತು ಹಾಗೆಯೇ ಅಲ್ಲಿ ಬರಗಾಲದ ಬರಸಿಡಿಲು ಬಡಿದಿತ್ತು. ಅಲ್ಲಿ ಜೀವನ ನಡೆಸುವುದು ಕಷ್ಟವಾಗಿ ಯಾರದೋ ಶಿಫಾರಸ್ಸಿನ ಮೇರೆಗೆ ಬಾಳೆಖಾನ್ ಎಸ್ಟೇಟ್ ಗೆ ಬಸ್ ಡ್ರೈವರ್ ಕೆಲಸಕ್ಕೆ ಸೇರಿಕೊಂಡ.

ರಾಮಣ್ಣನ ಸಂಸಾರ ಕೆಲವು ವರ್ಷಗಳ ಕಾಲ ಸುಂದರವಾಗಿಯೇ ಇತ್ತು. ಸ್ವಲ್ಪ ಕಷ್ಟ ಅಂತ ಆದದ್ದು ಅವನಿಗೆ ಮಗಳು ಹುಟ್ಟಿದಾಗ, ಬರುತ್ತಿದ್ದ ಕಡಿಮೆ ಸಂಬಳದಲ್ಲಿ ಮೂರು ಜನರ ಹೊಟ್ಟೆ ಉರಿಯುವುದು ರಾಮಣ್ಣನಿಗೆ ಕಷ್ಟವಾಗಿತ್ತು.

ಜೀವನ ನಿರ್ವಹಣೆಗೆ ರಾಮಣ್ಣ ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಕ್ರಮೇಣ ರಾಮಣ್ಣ ಎಸ್ಟೇಟ್ ನ ಎಲ್ಲರಿಗೂ ಆತ್ಮೀಯ ವ್ಯಕ್ತಿಯಾದ.
ಗಂಗೆಗಿರಿ ಹಾಗೂ ಬಾಳೆ ಖಾನ್ ಎಸ್ಟೇಟ್ ನ ಸಣ್ಣ ಗೂಡಂಗಡಿಗಳಿಗೆ ಸುತ್ತೂರು ಪೇಟೆಯಿಂದ ಸಾಮಾನುಗಳನ್ನು ತಂದುಕೊಡಲು ಪ್ರಾರಂಭಿಸಿದ ಅದಕ್ಕೆ ಪ್ರತಿಯಾಗಿ ಅಂಗಡಿಯವರು ರಾಮಣ್ಣನಿಗೆ ಅಲ್ಪಸ್ವಲ್ಪ ಹಣ ನೀಡುತ್ತಿದ್ದರು, ಇದು ರಾಮಣ್ಣನ ಬದುಕಿಗೆ ಸ್ವಲ್ಪ ಚೇತರಿಕೆ ತಂದಿತ್ತು.

ದಿನೇ ದಿನೇ ಎಸ್ಟೇಟ್ ನಲ್ಲಿ ರಾಮಣ್ಣ ಎಲ್ಲರ ಬೇಡಿಕೆಯ ವ್ಯಕ್ತಿಯಾಗಿದ್ದ. ಬೆಳಿಗ್ಗೆ ರಾಮಣ್ಣನಿಗೆ ಸುತ್ತೂರಿನಿಂದ ತರಬೇಕಿದ್ದ ವಸ್ತುಗಳ ಉದ್ದನೆಯ ಪಟ್ಟಿಯೇ ಸಿಗುತ್ತಿತ್ತು. ಔಷಧಿಗಳು, ತರಕಾರಿ ಹೀಗೆ ರಾಮಣ್ಣ ನ ಬಸ್ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಿತ್ತು. ರಾಮಣ್ಣನ ತಿಂಗಳ ಸಂಬಳದೊಂದಿಗೆ ದಿನನಿತ್ಯದ ಈ ದುಡಿಮೆಯು ಅದೃಷ್ಟ ಕುಲಾಯಿಸಿದ ಹಾಗೆ ಆಗಿತ್ತು.

ರಾಮಣ್ಣನ ಹೆಂಡತಿ ಸುಮಿತ್ರಮ್ಮ ಬಡತನದಲ್ಲಿ ಬೆಳೆದ ಹುಡುಗಿ. ದಿನೇ ದಿನೇ ರಾಮಣ್ಣ ತರುತ್ತಿದ್ದ ಹಣದ ರುಚಿಯನ್ನು ಹಿಡಿದುಕೊಂಡಳು.

ಮೊದಮೊದಲು ಸಾಮಾನ್ಯ ಉಡುಗೆಯನ್ನು ಉಡುತಿದ್ದ ಸುಮಿತ್ರಮ್ಮ ನ ವೇಶಭೂಷಣವೇ ಬದಲಾಗಿತ್ತು. ಹಾಗೆಯೇ ಅವಳ ಸಹವಾಸವು ಬದಲಾಗಿತ್ತು. ಮೊದಲು ಕೆಲಸದವರ ಜೊತೆ ಆತ್ಮೀಯತೆ ಇಂದ ಮಾತನಾಡುತ್ತಿದ್ದ ಸಾವಿತ್ರಮ್ಮಳ ಈಗಿನ ಗೆಳೆತನ ಎಸ್ಟೇಟ್ ನ ಮ್ಯಾನೇಜರ್ ನ ಹೆಂಡತಿಯೊಂದಿಗೆ.

ಮ್ಯಾನೇಜರ್ ನ ಹೆಂಡತಿ ಉಡುವ ಮೌಲ್ಯದ ಸೀರೆ ಬೇಕೆಂದು ರಾಮಣ್ಣನ ಬಳಿ ಸುಮಿತ್ರಮ್ಮ ಹಠ ಹಿಡಿಯುತ್ತಿದ್ದಳು. ರಾಮಣ್ಣ ಹೆಂಡತಿ ಮಗಳಿಗೆ ಹಿಂದೆ ಮುಂದೆ ನೋಡದೆ ಇದ್ದ ಹಣವನ್ನೆಲ್ಲ ಖರ್ಚು ಮಾಡುತ್ತಿದ್ದ.

ಮ್ಯಾನೇಜರ್ ನ ಹೆಂಡತಿ ಕೊಂಡ ಬಂಗಾರ ಬೆಳ್ಳಿ ಅಂತದೇ ಬೇಕೆಂದು ಸಾವಿತ್ರಮ್ಮ ಬೇಡಿಕೆಡುತ್ತಿದ್ದಳು. ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲೆ ಇತ್ತು. ರಾಮಣ್ಣನು ಹಾಗೋ ಹೀಗೂ ಹೊಂದಿಸುತ್ತಿದ್ದ ಆದರೆ ಅವನು ದುಡಿಮೆ ಸಾಕಾಗುತ್ತಿರಲಿಲ್ಲ.

ಈಗ ರಾಮಣ್ಣ ಮತ್ತೆ ಬೇರೊಂದು ದುಡಿಮೆಯ ದಾರಿ ಕಂಡುಕೊಂಡ.ಎಸ್ಟೇಟ್ ನ ಜನರು ಮೊದಲು ಎಸ್ಟೇಟ್ ನಲ್ಲಿ ಕಳ್ಳಬಟ್ಟಿ ಬೇಯಿಸಿ ಕುಡಿಯುತ್ತಿದ್ದರು. ಅಮಲು ಎನ್ನುವುದು ಅನಾದಿಕಾಲದಿಂದ ಇದ್ದ ವಿಷಯ. ನಾಗರಿಕತೆ ಇದನ್ನು ಬಿಟ್ಟು ಮುಂದುವರೆದ ಉದಾಹರಣೆಯೇ ಇಲ್ಲ, ಎಲ್ಲಾ ಕಾಲಘಟ್ಟದಲ್ಲೂ ಅದರ ಸ್ವರೂಪ ಬದಲಾಗಿತ್ತೆ ಹೊರತು ವಿಷಯ ಅದೇ ಇತ್ತು.

ಎಸ್ಟೇಟ್ ನ ಜನರು ಅಲ್ಲಲ್ಲಿ ಕಷ್ಟಪಟ್ಟು ಕಳ್ಳಬಟ್ಟಿ ಬೇಯಿಸಿ ಕದ್ದು ಮುಚ್ಚಿ ಕುಡಿಯುತ್ತಿದ್ದ ಇವರಿಗೆ ಸುತ್ತೂರು ಪೇಟೆಯ ಶಾಂತಲಾ ಬಾರ್ನಿಂದ ಪೇಟೆಯ ಮಧ್ಯವನ್ನು ತಂದುಕೊಡಲು ಪ್ರಾರಂಭಿಸಿದ ರಾಮಣ್ಣ. ಈ ವ್ಯವಸ್ಥೆ ಜನರಿಗೆ ಕುಳಿತಲ್ಲಿಗೆ ಸಾರಾಯಿ ಸಿಗುತ್ತಿತ್ತು. ಯಾವುದೇ ಕಷ್ಟ ಪಡುವ ಅಗತ್ಯವೂ ಇರಲಿಲ್ಲ, ರಾಮಣ್ಣನ ಜೇಬು ತುಂಬುತ್ತಿತ್ತು.

ಕೈಯಲ್ಲಿ ಕಾಂಚಾಣ ಕುಣಿವಾಗ ಮಾನವನ ಮನಸ್ಸು ಮಂಗನಂತೆ ಕುಣಿಯುತ್ತದೆ, ಹಾಗೆ ರಾಮಣ್ಣ ತನ್ನ ಹೆಂಡತಿ ಕೇಳಿದ್ದನ್ನು ಕೊಡಿಸಲು ಪ್ರಾರಂಭಿಸಿದ್ದ. ಇವನು ಕೊಡಿಸುತ್ತಿದ್ದಂತೆ ಸಾವಿತ್ರಮ್ಮನ ಬೇಡಿಕೆಗಳು ಹೆಚ್ಚಿದ್ದವು ಕೊಡಿಸಲು ತಡವಾದರೆ ಜಗಳೋ ಆಗುತ್ತಿತ್ತು ಹೀಗೆ 14 ವರ್ಷಗಳು ಕಳೆದಿತ್ತು.

ರಾಮಣ್ಣನ ಮಗಳು 12 ವರ್ಷದವಳಾಗಿದ್ದಳು ಹೆಂಡತಿಯ ಕುತ್ತಿಗೆಯಲ್ಲಿ ಯಾವಾಗಲೂ ಬಂಗಾರ ತಪ್ಪುತ್ತಿರಲಿಲ್ಲ. ಸಾವಿತ್ರಮ್ಮ ರಾಮಣ್ಣ ಏನಾದರೂ ತಂದು ಕೊಟ್ಟಾಗ ಅತಿಯಾಗಿ ಪ್ರೀತಿಸುತ್ತಿದ್ದಳು ಈ ಖುಷಿಗೆ ರಾಮಣ್ಣ ದುಡಿದದ್ದೆಲ್ಲ ಖರ್ಚು ಮಾಡುತ್ತಾ ಜೀವನವನ್ನು ಆನಂದಿಸುತ್ತಿದ್ದ.

ಇದೇ ಸಮಯದಲ್ಲಿ ಕಂಡಕ್ಟರ್ ಗೋಪಾಲನು ರಾಮಣ್ಣನ ಜೊತೆ ಸೇರಿದ್ದ. ದಿನ ಕಳೆದಂತೆ ರಾಮಣ್ಣ ಹಾಗೂ ಗೋಪಾಲನ ಆತ್ಮೀಯತೆ ಯೂ ಹೆಚ್ಚಿತ್ತು.

ಒಂದು ದಿನ ಬೆಳಗ್ಗೆ ಗೋಪಾಲನನ್ನು ರಾಮಣ್ಣ ಕರೆದು ತುಂಬಾ ಆತುರತುರವಾಗಿ ಏನನ್ನು ಹುಡುಕುತ್ತಿದ್ದ

"ಏನಾದ್ರೂ ಗೊತ್ತಾಯ್ತಾ"ಎಂದು ಕೇಳಿದ ರಾಮಣ್ಣ 

“ಇಲ್ಲ….”ಎಂದ ಗೋಪಾಲ

ಆ ಬೆಳಿಗ್ಗೆ ರಾಮಣ್ಣನ ಲೋಕವೇ ಮುಳುಗಿತ್ತು. ಅವನು ಹುಡುಕದೇ ಇದ್ದ ಸ್ಥಳವೇ ಇರಲಿಲ್ಲ ಕೆರೆ ಬಾವಿ ಎಲ್ಲ ಹುಡುಕಿದ. ಎಲ್ಲಾ ಸಂತೋಷಗಳಿದ್ದರೂ ಇವಳಿಗೆ ಏನಾಯ್ತು ಎಂದು ಚಿಂತೆಯಲ್ಲಿ ಕುಳಿತಿದ್ದ ರಾಮಣ್ಣನಿಗೆ ಸಾವಿತ್ರಮ್ಮನ ಸುಳಿವೇ ಸಿಗಲಿಲ್ಲ.

ಸಂಜೆ 5:00 ಆಗಿರಬಹುದು ತಲೆ ಮೇಲೆ ಕೈ ಇಟ್ಟು ಕುಳಿತಿದ್ದ ರಾಮಣ್ಣನ ಬಳಿ ಬಂದ ಗೋಪಾಲ

“ಅಣ್ಣ……” ಎಂದ ಮೆಲ್ಲನೆ

“ಏನು ಗೋಪಾಲ ಏನಾದರೂ ವಿಷಯ ತಿಳಿತಾ”ಎಂದು ಕೇಳಿದ ರಾಮಣ್ಣ ದುಃಖ ಆತುರ ತುಂಬಿದ ಧ್ವನಿಯಲ್ಲಿ.

“ಅದು…… ಅದು….”ಎಂದು ತೊತಲಿಸುತ್ತಿದ್ದ ಗೋಪಾಲ

ರಾಮಣ್ಣನ ದುಃಖ ಮತ್ತಷ್ಟು ಹೆಚ್ಚಾಯಿತು. ಎಲ್ಲಿ ಏನಾದರೂ ಎಂದು ತಿಳಿಯದೆ, ಗೋಪಾಲನ್ನು ಹಿಡಿದು

“ಹೇಳು ಬೇಗ” ಎಂದ ಜೋರಾಗಿ.

“ಅಣ್ಣ.. ಅದು.. ಅದು..”ಎಂದು ಮತ್ತೆ ತೊದಲಿದ ಗೋಪಾಲನ ಧ್ವನಿಯಲ್ಲಿ ವಿಷಯ ತಿಳಿಸುವ ದಾರಿ ತಿಳಿಯದಂತಾಗಿತ್ತು.

ಸಾವಿತ್ರಮ್ಮ ಮ್ಯಾನೇಜರ್ನ ತಮ್ಮ ನ ಜೊತೆಗೆ, ಇದ್ದ ಬೆಳ್ಳಿ, ಬಂಗಾರ, ಹಣ, ಎಲ್ಲ ಹಿಡಿದುಕೊಂಡು ತನ್ನ 12 ವರ್ಷದ ಮಗಳನ್ನು ರಾಮಣ್ಣನನ್ನು ಬಿಟ್ಟು ಓಡಿಹೋಗಿದ್ದಳು. ಗೋಪಾಲ ಈ ವಿಷಯ ಕಷ್ಟಪಟ್ಟು ರಾಮಣ್ಣ ಬಳಿ ಹೇಳಿದ.

ಇಷ್ಟೊತ್ತು ಇದ್ದ ರಾಮಣ್ಣನ ದುಃಖ ಕೋಪವಾಗಿ ಬದಲಾಗಿತ್ತು ಏನು ಮಾಡಲು ಆಗದೆ ಗೋಳಾಡಿದ್ದ ರಾಮಣ್ಣ.

ಹೆಂಡತಿ ಓಡಿ ಹೋದ ದುಃಖಕ್ಕೆ ರಾಮಣ್ಣ ಸಾರಾಯಿಗೆ ದಾಸನಾದ. ಕುಡಿತದ ಚಟ ಹೊಂದಿದ್ದರು ಬಸ್ ಚಲಾಯಿಸುವಾಗ ಮಾತ್ರ ತನ್ನ ಹತೋಟಿಯಲ್ಲಿ ಇರುತ್ತಿದ್ದ.

ರಾಮಣ್ಣನ ಪರಿಸ್ಥಿತಿ ತೀರಾ ಹದಗೆಟ್ಟಿತ್ತು ತನ್ನ ಬಳಿ ಇದ್ದ ಹಣವೆಲ್ಲ ಹೆಂಡತಿ ತೆಗೆದುಕೊಂಡು ಹೋಗಿದ್ದಳು, ಮಗಳನ್ನು ಸಾಕುವ ಜವಾಬ್ದಾರಿಯಲ್ಲ ರಾಮಣ್ಣನ ಮೇಲೆ ಇತ್ತು.

ಉರಿಯುವ ಗಾಯಕ್ಕೆ ಉಪ್ಪು ಹಾಕಿದಂತೆ, ರಾಮಣ್ಣನ ಬಾಳಲ್ಲಿ ಮತ್ತೊಂದು ಆಘಾತ ಕಾದಿತ್ತು.

ಒಂದು ದಿನ ರಾಮಣ್ಣನ ಮಗಳು ಸಂಧ್ಯಾ ರಕ್ತ ವಾಂತಿ ಮಾಡುತ್ತಿದ್ದಳು. ಏನು ತಿಂದರೂ ಜೀರ್ಣಿಸಿ ಕೊಳ್ಳುವ ಶಕ್ತಿ ಅವಳಿಗೆ ಇರಲಿಲ್ಲ. ರಾಮಣ್ಣ ಸಂಧ್ಯಾಳನ್ನು ಸುತ್ತೂರು ಆಸ್ಪತ್ರೆಯಲ್ಲಿ ತೋರಿಸಿದಾಗ ಇಲ್ಲಿ ಆಗುವುದಿಲ್ಲ ಭದ್ರಾಪುರದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದರು. ಅಲ್ಲಿ ಸಂಧಿಗಳನ್ನು ಐಸಿಯು ವಾರ್ಡಿಗೆ ಸೇರಿಸಲಾಯಿತು.

ರಾಮಣ್ಣ ಹೊರಗೆ ನಿಂತಿದ್ದ ಸ್ವಲ್ಪ ಹೊತ್ತಿನ ನಂತರ ಬಂದ ವೈದ್ಯರು

“ನಿಮ್ಮ ಮಗಳಿಗೆ ರಕ್ತದ ಕ್ಯಾನ್ಸರ್ ಇದೆ, ಇದು ಇನ್ನೂ ಮೊದಲ ಹಂತದಲ್ಲಿ ಇರುವುದರಿಂದ ಗುಣಪಡಿಸಬಹುದು, ಆದರೆ ಶಸ್ತ್ರ ಚಿಕಿತ್ಸೆಗೆ ಸುಮಾರು 3 ಲಕ್ಷ ರೂ ಬೇಕಾಗಬಹುದು. ಎಂದಿದ್ದರು

ರಾಮಣ್ಣ ಮಗಳನ್ನು ಕರೆದುಕೊಂಡು ಮನೆಗೆ ಬಂದ. ಕೈಯಲ್ಲಿ ಬಿಡಿಗಾಸು ಇರಲಿಲ್ಲ, ಅವರಿವರ ಬಳಿ ಕೇಳಿ ಒಂದು ಲಕ್ಷ ರೂ ಹೊಂದಿಸಿದ್ದ ಇನ್ನು ಉಳಿದ ಹಣಕ್ಕೆ ಏನು ಮಾಡುವುದು ಎಂದು ಚಿಂತೆಯಲ್ಲಿದ್ದ

ಒಂದು ರಾತ್ರಿ ರಾಮಣ್ಣ ಹಾಗೂ ಗೋಪಾಲ ಕುಡಿಯುತ್ತಾ ಕುಳಿತಿದ್ದರು.

“ಗೋಪಾಲ, ಈ ಹಾಳಾದ ಮದುವೆ ಒಂದು ಆಗಬೇಡ” ಎಂದ ರಾಮಣ್ಣ

“ನಾನ್ ಮದುವೆ ಆಸೆ ನೇ ಬಿಟ್ಟಿದ್ದೇನೆ ಅಣ್ಣ.. ನಮಗೆಲ್ಲ ಯಾಕ್ ಮದುವೆ ಹೀಂಗೆ ಆರಾಮಾಗಿ ಇರ್ತೀನಿ..”ಗೋಪಾಲ ಉತ್ತರಿಸಿದ

“ಅಲ್ವೋ ನೀನು ಒಂದು ಹುಡುಗಿನೂ ನೋಡ್ಕೊಂಡಿಲ್ವಾ..”ಕೇಳಿದ ರಾಮಣ್ಣ

“ಈ ತಂಪು ಹೊತ್ತಲ್ಲಿ ಅದ್ನ ಯಾಕೆ ನೆನಪಿಸ್ತೀಯಾ. ಅವಳಿಗೆ ಮದುವೆ ಆಗಿದೆ, ನಂಗೆ ಸ್ವಲ್ಪ ಎಣ್ಣೆ ಹಾಕು”ಎಂದ ಗೋಪಾಲ

“ಅದೆಲ್ಲಾ ಸಾಯಲಿ ಮಾರಾಯ ಈ ದುಡ್ಡೊಂದು ಹೆಂಗೆ ಹೊಂದಿಸುವುದು ಅಂತ ಗೊತ್ತಾಗ್ತಿಲ್ಲ”
ಎಂದ ರಾಮಣ್ಣ.

ಅಷ್ಟೊತ್ತಿಗೆ ಜೋರಾಗಿ ಗಲಾಟೆ ನಡೆಯುತ್ತಿರುವ ಸದ್ದಾಯಿತು. ಯಾರೋ ಜೋರ್ ಜೋರಾಗಿ ಬಯ್ಯುತ್ತಿರುವಂತೆ ಕೇಳಿಸಿತು. ಇಬ್ಬರು ಸೀದಾ ಸದ್ದು ಬರುವ ಕಡೆಗೆ ಹೋದರು, ಅಲ್ಲಿ ಒಬ್ಬನನ್ನು ಕಟ್ಟಿಹಾಕಿ ಹತ್ತಾರು ಜನ ಹೊಡೆಯುತ್ತಿದ್ದರು. ಹತ್ತಿರ ಹೋಗಿ ವಿಷಯ ಕೇಳಿದ ಗೋಪಾಲ,

“ಇವನು ಪಕ್ಕದ ಎಸ್ಟೇಟ್ ಅವ್ನು ನಮ್ಮ ಸ್ಟೇಟ್ ಗೆ ನುಗ್ಗಿ ಗಂಧ ಕದಿತಿದ್ದಾನೆ ಬಡ್ಡಿ ಮಗ… ಅದಕ್ಕೆ ನಾಲ್ಕು ಬಿಗಿದ್ವಿ..”ಎಂದು ಹೇಳಿದ ಅಲ್ಲಿದ್ದವನೊಬ್ಬ.
ಅಲ್ಲಿಗೆ ಮ್ಯಾನೇಜರ್ ಬಂದು ಆ ಗಲಾಟೆಯನ್ನು ತಿಳಿಗೊಳಿಸಿದ್ದ.

ಮನೆಗೆ ಬರುವ ದಾರಿಯಲ್ಲಿ ನಡೆಯುತ್ತ ರಾಮಣ್ಣ ಗೋಪಾಲನ ಬಳಿ ಕೇಳಿದ
“ಯಾರೋ ಅವನು”

“ಅಣ್ಣ ಅವನು ರಾಚಪ್ಪ ಅಂತ, ಪಕ್ಕದ ಸ್ಟೇಟ್ ಅವ್ನು ದೊಡ್ಡ ಖದೀಮ, ಅವನು ಮಾಡದೆ ಇರೋ ದಂಧೆ ಇಲ್ಲ. ರಾತ್ರಿಯಲ್ಲಿ ಗಂಧ ಕದಿಯೋದು, ಅದನ್ನ ಸುತ್ತೂರು ಪೇಟೆಯಲ್ಲಿ ಯಾರಿಗೂ ಮಾರೋದು, ಒಳ್ಳೆಯ ಲಾಭ ಭರ್ಜರಿ ದುಡ್ಡು ಸಿಗುತ್ತೆ ಆದರೆ ಈ ಮುಂಡೆದ್ಕೆ ಉಳಿಸಿಕೊಳ್ಳೋದು ಗೊತ್ತಿಲ್ಲ ದುಡ್ಡು ಸಿಕ್ಕ ಸಂಜೆ ಅಲ್ಲೇ ಇಸ್ಪೀಟ್ ಆಟ ಆಡಿ ಎಲ್ಲಾ ಕಳೆದುಕೊಂಡು ಬರ್ತಾನೆ” ಅಂದ ಗೋಪಾಲ.

ರಾಮಣ್ಣ ಮನೆಗೆ ಬಂದು ಮಲಗಿದ. ಸ್ವಲ್ಪ ದೂರದಲ್ಲೇ ಮಗಳು ಸಂಧ್ಯಾ ಕೆಮ್ಮುತಾ ಮಲಗಿದ್ದಳು. ರಾಮಣ್ಣನ ತಲೆಯಲ್ಲಿ ಹಲವಾರು ಯೋಜನೆಗಳು ಬಂದು ಅದು ಒಂದಕ್ಕೆ ನಿರ್ದಿಷ್ಟವಾಗಿ ನಿಂತಿತು. ಹೇಗಾದರೂ ಮಾಡಿ ದುಡ್ಡು ಮಾಡಬೇಕು ಇರುವ ಒಬ್ಬಳ ಮಗಳನ್ನು ಉಳಿಸಿಕೊಳ್ಳಬೇಕು. ಹಾಗೆ ಯೋಚಿಸುತ್ತಾ ನಿದ್ರೆಗೆ ಜಾರಿದ್ದ.

ಒಮ್ಮೆ ಸುತ್ತೂರಿನಿಂದ ರಾಮಣ್ಣನ ಬಸ್ಸು ವಾಪಸ್ ಎಸ್ಟೇಟ್ ಗೆ ಬರುವಾಗ ರಾಚಪ್ಪನೂ ಇದ್ದ, ಅಲ್ಲಿ ಶುರುವಾದ ಅವರ ಮಾತುಕತೆ, ಆತ್ಮೀಯತೆಗೆ ತಿರುಗಿತ್ತು.

                    **

ರಾಮಣ್ಣ ರೇರ್ ಮಿರರ್ ನಲ್ಲಿ ರಾಚಪ್ಪನತ್ತ ನೋಡಿ ನಗೆ ಬೀರಿದ್ದ. ಬಸ್ ನಿಶಬ್ದವಾಗಿತ್ತು, ದಿನಾ ಏನಾದರೂ ಮಾತುಕತೆಯಲ್ಲಿದ್ದ ಜನರು ಅದ್ಯಾಕೋ ಮೌನಕ್ಕೆ ಶರಣಾಗಿದ್ದರು.

ಕವಿತಾಳ್ಗೆ ಈ ಮೌನ ಮತ್ತಷ್ಟು ಭೀತಿ ಹೆಚ್ಚಿಸುತ್ತಿತ್ತು. ಗಂಡನ ಕೈಯನ್ನು ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡಳು.

ರಾಮಣ್ಣನ ತಲೆಯಲ್ಲಿ ಯೋಚನೆಗಳು ಮತ್ತೆ ಹಿಂದಕ್ಕೆ ಹೋಗಲು ಪ್ರಾರಂಭಿಸಿದವು.

                      **

ರಾಚಪ್ಪ ಹಾಗೂ ರಾಮಣ್ಣನ ಆತ್ಮೀಯತೆ ಹೆಚ್ಚಾದಾಗಿನಿಂದ ರಾಮಣ್ಣ ರಾಚಪ್ಪನ ಜೊತೆ ಸೇರಿ ಒಂದು ಉಪಾಯ ಮಾಡಿದ್ದ. ಮಗಳ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಲು ಇರುವ ಮಾರ್ಗ ರಾಚಪ್ಪನ ಜೊತೆ ಸೇರಿ ಗಂಧ ಕದ್ದು ಮಾರುವುದು ಎಂದು.

“ನಾನು ಇಷ್ಟು ದಿನ ನನ್ನ ದುರಾಸೆಗೆ ಕದ್ದಿದ್ದೀನಿ ಆದರೆ ಈಗ ನಿನ್ನ ಮಗಳಿಗೆ ಒಳ್ಳೇದಾಗುತ್ತೆ ಅಂದ್ರೆ ಮಾಡಲ್ವಾ ತಲೆ ಬಿಸಿ ಮಾಡ್ಕೋಬೇಡ”
ಎಂದಿದ್ದ ರಾಚಪ್ಪ.
ಇವರ ಜೊತೆ ಗೋಪಾಲನ್ನು ಸೇರಿಕೊಂಡ.

ರಾಚಪ್ಪ ಶಿಕಾರಿಯ ನೆಪದಲ್ಲಿ ರಾತ್ರಿ ಕೋವಿ ಹಿಡಿದುಕೊಂಡು ಗಂಧದ ಮರ ಇರುವ ಜಾಗವನ್ನು ಗುರುತಿಸುವುದು, ಮಾರನೇ ದಿನ ಮೂವರು ಹೋಗಿ ಮರ ಕಡಿದು, ಅಲ್ಲಿ ಮರ ಇತ್ತು ಎಂಬುದಕ್ಕೆ ಸಾಕ್ಷಿ ಇಲ್ಲದಂತೆ ಮಾಡುವುದು, ಮತ್ತೊಂದು ದಿನ ಹೋಗಿ ಕಡಿದ ಗಂಧದ ಮರವನ್ನು ಡ್ರೆಸ್ಸಿಂಗ್ ಮಾಡಿ ಗಂಧದ ತಿರುಳನ್ನಷ್ಟೇ ಒಂದು ಕಡೆ ಬಚ್ಚಿಟ್ಟು, ಮರುದಿನ ಬೆಳಗ್ಗೆ ಮೆಲ್ಲನೆ ಬಸ್ಸಿನಲ್ಲಿ ಸಾಗಿಸಿ ಸುತ್ತೂರು ಪೇಟೆಯಲ್ಲಿ ಇರುವ ಬಶೀರ್ ಸಾಬೀಗೆ ಮಾರುವುದು ಇದು ಇವರ ಉಪಾಯ.

ಈ ಉಪಾಯ ಕೇಳಿ ರಾಮಣ್ಣ ಖುಷಿಯಾಗಿದ್ದ.

ರಾಚಪ್ಪ ಗಂಧದ ಮರವನ್ನು ಗುರುತಿಸಿದ ವಿಷಯ ತಿಳಿಸಿದ, ಮರುದಿನ ರಾತ್ರಿ ಗೋಪಾಲ ರಾಮಣ್ಣ ರಾಜಪ್ಪ ಮೂವರು ಸೇರಿ ಗಂಧದ ಮರವನ್ನು ಕಡಿದು ಮೊದಲೇ ನಿರ್ಧರಿಸಿದಂತೆ ಒಂದು ಕಡೆ ಬಚ್ಚಿಟ್ಟರು.

“ಇದನ್ನು ಭಾನುವಾರ ಸಾಗಿಸಬೇಕು ಅವತ್ತು ಒಳ್ಳೆ ರೇಟ್ ಸಿಗುತ್ತೆ ಮತ್ತೆ ಸಾಗ್ಸೋದು ಸುಲಭ ಆ ಪೇಟೆಯ ಜನ ಜಂಗುಳಿಯಲ್ಲಿ ನಮ್ಮನ್ನು ಯಾರು ಅಷ್ಟು ಸಲ್ಲಿಸಾಗಿ ಅನುಮಾನ.”
ಎಂದ ರಾಚಪ್ಪ. ರಾಮಣ್ಣ ಹಾಗೂ ಗೋಪಾಲ ಇಬ್ಬರು ಒಪ್ಪಿಕೊಂಡರು.

ಶುಕ್ರವಾರ ರಾತ್ರಿ ಮೂವರು ಸೇರಿ ಗಂಧದ ಮರವನ್ನು ಡ್ರೆಸ್ಸಿಂಗ್ ಮಾಡಿದ್ದರು. ಆ ಕತ್ತಲಲ್ಲಿ ಸ್ವಲ್ಪವೂ ಶಬ್ದ ಬರೆದ ಹಾಗೆ ಮರವನ್ನು ಕೆತ್ತುವ ಕಲೆಯಲ್ಲಿ ರಾಚಪ್ಪ ಅದ್ವಿತೀಯ ನಾಗಿದ್ದ. ನೀಟಾಗಿ ಮರವನ್ನು ಕೆತ್ತಿದಾಗ 15 ಕೆಜಿ ಗಂಧದ ತಿರುಳು ಸಿಕ್ಕಿತ್ತು. ರಾಮಣ್ಣನ ಖುಷಿಗೆ ಪಾರವೇ ಇರಲಿಲ್ಲ.

“ಇಂತದ್ದು ನಾಲ್ಕು ಮರ ಕಡುದ್ರೆ ಸಾಕು ರಾಮಣ್ಣ”ಅಂದಿದ್ದ ರಾಚಪ್ಪ

ಅಷ್ಟೊತ್ತಿಗೆ ದೂರದಲ್ಲಿ ಯಾರೋ ನಡೆದುಕೊಂಡು ಬರುವ ಸದ್ದಾಯಿತು

“ಈ ರಾತ್ರಿಯಲ್ಲಿ ತಿರುಗೋ ಬ*** ಅವನೊಬ್ಬನೇ ರಮೇಶ” ಎಂದ ರಾಚಪ್ಪ ಕೋಪದಿಂದ.

ಮೂವರು ಬೇಗನೆ ಗಂದದ ತಿರುಳನ್ನು ಅಲ್ಲೇ ಇದ್ದ ತೊಟ್ಟಿಲು ಗುಂಡಿಗೆ ಹಾಕಿ ಯಾರಿಗೂ ಅನುಮಾನ ಬರದಂತೆ ಬಚ್ಚಿಟ್ಟರು.

“ನಾಳೆ ಇದನ್ನು ಮನೆಗೆ ಸಾಗಿಸಬೇಕು ಇವತ್ತು ಆಗಲ್ಲ ಆ ರಮೇಶ ಇಲ್ಲೇ ತಿರುಗುತ್ತಾ ಇದ್ದಾನೆ”
ಎಂದ ರಾಜಪ್ಪ,ಮೂವರು ಅಲ್ಲಿಂದ ಹೊರಟರು.

ಶನಿವಾರ ರಾತ್ರಿ ಅಲ್ಲಿಗೆ ಹೋಗಿ ನೋಡಿದರೆ ಅಲ್ಲಿ ಮಾಲು ಇರಲಿಲ್ಲ. ರಾಮನಿಗೆ ಜೀವವೇ ಹೋದಂತೆ ಆಯಿತು ಇದ್ದ ಒಂದು ಬಾಗಿಲು ಮುಚ್ಚಿದಾಗಾಗಿತ್ತು.

“ಆ ಬೊಳಿಮಗನೆ ತೆಗೆದಿರಬೇಕು ಇಲ್ಲಿ ಇನ್ಯಾರ್ ಬರ್ತಾರೆ ಅವ್ನೆ.. ಅವನಿಗೆ ಒಂದು ಗತ್ತಿ ಕಾಣಿಸಬೇಕು ಇಲ್ಲ ಅಂದ್ರೆ ಕಷ್ಟ ಇದೆ.”
ಎಂದಿದ್ದರಾ ರಾಚಪ್ಪ.
ರಾಮಣ್ಣನಿಗೆ ರಮೇಶನ ಮೇಲೆ ಅತೀವ ಕೋಪ ಬಂದಿತ್ತು.
**

” ಸುತ್ತೂರು …….ಲಾಸ್ಟ್ ಸ್ಟಾಪ್…” ಎಂದು ಎಂದು ಗೋಪಾಲ ಪಿರ್ರೆಂದು ವಿಶಾಲ್ ಹಾಕಿದ.
ಅದಾಗಲೇ ಬಸ್ಸು ಸುತ್ತೂರು ಬಸ್ ಸ್ಟ್ಯಾಂಡ್ ತಲುಪಿತ್ತು. ಎಲ್ಲರೂ ಇಳಿದು ಅವರವರ ಕೆಲಸದತ್ತ ಹೋಗುತ್ತಿದ್ದರು, ರಮೇಶ ಹಾಗೂ ಕವಿತಾ ಕೂಡ ಇಳಿದರು. ರಾಚಪ್ಪ ಮಾತ್ರ ರಮೇಶ ಹಿಡಿದಿದ್ದ ಬ್ಯಾಗನ್ನೆ ನೋಡುತ್ತಿದ್ದ. ರಾಮಣ್ಣ ರಾಜಪ್ಪನ ಕಡೆ ನೋಡಿ ಏನೋ ಸನ್ನೆ ಮಾಡಿದ, ರಾಚಪ್ಪ ಹೌದು ಎನ್ನುವಂತೆ ತಲೆ ಅಲ್ಲಾಡಿಸಿದಾ.

Button align center

ಸುತ್ತಲಿನ ಹತ್ತಾರು ಹಳ್ಳಿಗೂ ಸುತ್ತೂರು ಪೇಟೆ ಒಂದು ಕೇಂದ್ರ ಸ್ಥಾನ ಇದ್ದ ಹಾಗೆ. ಭಾನುವಾರ ನಡೆಯುವ ಸಂತೆಗೆ ಜನಸಾಗರವೇ ಸೇರುತ್ತಿತ್ತು.
ಸುತ್ತೂರಿನ ಬಸ್ ಸ್ಟ್ಯಾಂಡ್ ನಿಂದ ಸ್ವಲ್ಪ ದೂರದಲ್ಲಿ ಸಂತೆ ಮೈದಾನವಿತ್ತು. ಆ ಮೈದಾನದ ತುಂಬಾ ಉದ್ದಕ್ಕೆ ವ್ಯಾಪಾರಿಗಳು ತರಕಾರಿ ಮಾರುವವರು ದಿನಬಳಕೆ ವಸ್ತುಗಳನ್ನು ಮಾರುವವರು ಮಸಾಲೆಗಳನ್ನು ಮಾರುವವರು ಹೀಗೆ ಎಲ್ಲಾ ವಸ್ತುಗಳನ್ನು ಚಾಪೆಯ ಮೇಲೆ ಹರಡಿಕೊಂಡು ಕೂರುತ್ತಿದ್ದರು, ಜನರು ಅವರ ಬಳಿ ಹೋಗಿ ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು.

ಸುತ್ತೂರಿನಲ್ಲಿ ಸಣ್ಣ ಸಣ್ಣ ಗೂಡಂಗಡಿ ವ್ಯಾಪಾರಿಗಳು, ಹೋಲ್ ಸೇಲ್ ವ್ಯಾಪಾರಿಗಳು ,ಬಾರು ,ಆಸ್ಪತ್ರೆ ಹೀಗೆ ಸಕಲ ಸೌಲಭ್ಯವು ಇತ್ತು. ಸಂತ ಮೈದಾನಕ್ಕೆ ಹೋಗುವ ಸಣ್ಣ ಓಣಿಯಂತಿರುವ ದಾರಿಯ ಪಕ್ಕದಲ್ಲಿ ಒಂದು ಚಿಕ್ಕ ಗೂಡ ಅಂಗಡಿಯಲ್ಲಿ ಬಶೀರ್ ಸಾಬಿ ಎಂಬುವನು ಲಾಟರಿ ಟಿಕೆಟ್ ಗಳನ್ನು ಮಾರುತಿದ್ದ.

ಒಂದೇ ನಾಣ್ಯಕ್ಕೆ ಎರಡು ಮುಖ ಇರುವ ಹಾಗೆ ಬರಿ ಒಳ್ಳೆಯ ವಿಚಾರಕ್ಕೆ ಅಷ್ಟೇ ಅಲ್ಲದೆ ಕಾಳ ದಂಧೆ ಗೂ ಸುತ್ತೂರು ಪ್ರಸಿದ್ಧಿ ಹೊಂದಿತ್ತು. ಆದರೆ ಅದರ ಅರಿವು ತಿಳಿದವರಿಗಷ್ಟೇ ಗೊತ್ತು. ಬಶೀರ್ ಸಾಬಿ ಇಂತಹ ಕಾಳ ದಂಧೆ ಗೆ ಒಂದು ಕೊಂಡಿಯಂತಿದ್ದ. ಜನರ ಕಣ್ಣಿಗೆ ಒಂದು ಲಾಟರಿ ಟಿಕೆಟ್ ಅಂಗಡಿ ಹೊಂದಿದ್ದ ಇವನು ಅಂಗಡಿಯಲ್ಲಿ ಎಲ್ಲಾ ರೀತಿಯ ದಂಧೆಯೂ ನಡೆಯುತ್ತಿತ್ತು ಅದರಲ್ಲಿ ಗಂಧ ಸಾಗಾಣಿಕೆಯು ಒಂದು.

ಸುತ್ತೂರಿನ ಅಕ್ಕಪಕ್ಕದ ಊರಿನವರು ಕದ್ದು ತರುತ್ತಿದ್ದ ಗಂಧವನ್ನು ಬಶೀರ್ ಸಾಬಿ ಒಂದು ಧರ ನಿಗದಿ ಮಾಡಿ, ಅದಕ್ಕೆ ಒಪ್ಪಿದರೆ ಆ ಗಂಧವನ್ನು ಅವರಿಂದ ಪಡೆದು ಹೆಚ್ಚಿನ ಗಂಧ ಶೇಕರಣೆ ಮಾಡಿ ಅದನ್ನು ಒಳ್ಳೆಯ ಬೆಲೆಗೆ ಬೇರೆಯವರಿಗೆ ಮಾರುತಿದ್ದ.

ಬಶೀರ್ ಸಾಬಿಯನ್ನು ಎರಡು ಬಾರಿ ಪೊಲೀಸ್ ಅರೆಸ್ಟ್ ಮಾಡಿದ್ದರು. ಹಣದ ಪ್ರಭಾವದಿಂದ ಹೊರಗೆ ಬಂದಿದ್ದ. ಪ್ರತಿ ತಿಂಗಳು ಬಶೀರ್ ಸಾಬಿಯ ಕಡೆಯಿಂದ ಪೊಲೀಸ್ ಸ್ಟೇಷನ್ ಗೆ ಮಾಮೂಲು ಹೋಗುತ್ತಿದ್ದ ಕಾರಣ ಪೊಲೀಸ್ ಕೂಡ ನೋಡಿಯೂ ನೋಡದಂತೆ ಇರುತ್ತಿದ್ದರು.

ಬಸ್ ಇಳಿದ ರಮೇಶ ಹಾಗೂ ಕವಿತಾ ಸಂತೆ ಮೈದಾನದ ಓಣಿಯ ದಾರಿಯ ಕಡೆಗೆ ಹೋಗುತ್ತಿದ್ದರು. ರಾಚಪ್ಪ ,ರಾಮಣ್ಣ ಹಾಗೂ ಗೋಪಾಲ ಅವರನ್ನೇ ನೋಡುತ ನಿಂತಿದ್ದರು.

“ಆ ಬ್ಯಾಗನಲ್ಲಿ ಏನಿರಬಹುದು ಅಣ್ಣ”ಎಂದ ಗೋಪಾಲ

“ನಂಗೂ ಗೊತ್ತಾಗ್ತಾ ಇಲ್ಲ ಆದರೆ ಪಕ್ಕ ಅದು ಗಂಧದ ತಿರುಳೆ ಇರಬಹುದು” ಎಂದ ರಾಚಪ್ಪ

“ಅದೆಂಗೆ ಹೇಳ್ತೀರಾ” ಎಂದ ಗೋಪಾಲ

“ನೋಡು, ನಾವು ಗಂಧದ ತಿರುಳನ್ನು ಎರಡು ಅಡಿಯ ಐದು ತುಂಡುಗಳನ್ನು ಮಾಡಿದ್ವಿ ರಮೇಶ ಹಿಡಿದಿರುವ ಬ್ಯಾಗು ಕೂಡ ಅಂದಾಜು ಎರಡು ಅಡಿ ಉದ್ದ ಇರಬಹುದು.ಮತ್ತೊಂದು ವಿಷಯ ಪೇಟೆಗೆಬರುವಾಗ ಆ ಬ್ಯಾಗ್ ನಲ್ಲಿ ಏನು ತುಂಬ್ಕೊಂಡ್ ಬಂದಿರಬಹುದು. ಒಂದೇ ಕಾರಣ ಯಾವುದಾದರೂ ಮಾರುವ ವಸ್ತು ಇದ್ದೇ ಇರಬೇಕು”ರಾಜಪ್ಪ ದೀರ್ಘವಾಗಿ ನುಡಿದ.

“ಹೌದು ಹೌದು, ಅವರು ಎಸ್ಟೇಟ್ ನಲ್ಲಿ ಕೆಲಸ ಮಾಡೋರು, ಅವರತ್ರ ಪೇಟೆಯಲ್ಲಿ ಮಾರುವಂತ ವಸ್ತು ಏನಿರಲಿಕ್ಕೆ ಸಾಧ್ಯ ನಿಜವಾಗಿ ಅದು ನಾವು ಬಚ್ಚಿಟ್ಟ ಮಾಲೆ ಪಕ್ಕ.” ಉದ್ಗರಿಸಿದ ರಾಮಣ್ಣ.

ಮೂರು ಜನ ಬಸ್ನ ಒಳಗೆ ಕುಳಿತರು ಬಸ್ನಲ್ಲಿ ಇವರನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ.

“ಹೇಗಾದರೂ ಮಾಡಿ ರಮೇಶನ ಕೈಯಲ್ಲಿರುವ ಬ್ಯಾಗನ್ನು ಕದಿಯಬೇಕು. ಹಾಗಾಗಬೇಕು ಎಂದರೆ ಅವನ ಹೆಂಡತಿಯನ್ನು ಸಂತೆಯ ಜನಜಂಗುಳಿಯಲ್ಲಿ ತಪ್ಪಿ ಹೋಗುವ ಹಾಗೆ ಮಾಡಬೇಕು. ಆಗ ರಮೇಶನ ಗಮನ ಎಲ್ಲ ಹೆಂಡತಿಯ ಮೇಲೆ ಇರುವಾಗ ಅವನ ಕೈಯಲ್ಲಿರುವ ಬ್ಯಾಗನ್ನು ತಪ್ಪಿಸಬೇಕು”ಹೀಗೆ ರಾಚಪ್ಪ ತನ್ನ ಉಪಾಯವನ್ನು ಇಬ್ಬರಿಗೂ ವಿವರಿಸಿದ.

ಇಬ್ಬರು ಒಪ್ಪಿ ತಲೆ ಆಡಿಸಿದ್ದರು ಮುಂದುವರಿದು ರಾಜಪ್ಪ
“ನೋಡು ಗೋಪಾಲ, ನೀನು ಅವನ ಹೆಂಡತಿ ಜನಜಂಗುಳಿ ಯಲ್ಲಿ ಕಳೆದು ಹೋಗುವ ಹಾಗೆ ಮಾಡಬೇಕು ಸರಿಯಾದ ಸಮಯ ನೋಡಿ ನಾವು ಆ ಬ್ಯಾಗನ್ನು ಕದೀತೀವಿ”ಎಂದ

“ಸರಿ”
ಎಂದಗೋಪಾಲ ಅಲ್ಲೇ ತನ್ನ ಬ್ಯಾಗ್ ನಲ್ಲಿದ್ದ ಒಂದು ಶಾಲನ್ನು ತಲೆಗೆ ಬರಿ ಕಣ್ಣಷ್ಟೇ ಕಾಣುವಂತೆ ಮುಸುಕು ಹಾಕಿಕೊಂಡು ರಮೇಶ ಹಾಗೂ ಕವಿತಾ ರ ಕಡೆಗೆ ನಡೆದ.

ಕವಿತಾ ಹಾಗೂ ರಮೇಶ ಕೈ ಹಿಡಿದುಕೊಂಡು ಬಶೀರ್ ಸಾಬಿಯ ಅಂಗಡಿ ಕಡೆಗೆ ಹೋಗುತ್ತಿದ್ದರು. ರಮೇಶ ಆ ಬ್ಯಾಗನ್ನು ಬಲವಾಗಿ ಹಿಡಿದುಕೊಂಡಿದ್ದ. ಗೋಪಾಲ ಅವರಿಗೆ ತಿಳಿಯದಂತೆ ಅವರನ್ನು ಹಿಂಬಾಲಿಸುತ್ತಿದ್ದ.

ಡೊಳ್ಳು ಹೊಟ್ಟೆಯ ದಡೂತಿ ದೇಹ, ಬಿಳಿಯ ಗಡ್ಡ, ತಲೆಯ ಮೇಲೊಂದು ಬಿಳಿಯ ಟೋಪಿ ಹಾಕಿಕೊಂಡಿದ್ದ ಒಬ್ಬ ವ್ಯಕ್ತಿ ಅಂಗಡಿಯ ಒಳಗೆ ಒಂದು ಟೇಬಲ್ ನ ಮುಂದೆ ಕರ್ನಾಟಕ ರಾಜ್ಯ ಲಾಟರಿ ಗಳನ್ನು ಜೋಡಿಸಿಟ್ಟಿದ್ದ.
ಸಂತೆಯ ದಿನ ಒಳ್ಳೆಯ ಲಾಭ ಅವನಿಗೆ ಹಣದ ಅತೀ ಆಸೆ ಹೊಂದಿದವರು ಇವನ ಅಂಗಡಿಗೆ ಮುಗಿ ಬೀಳುತ್ತಿದ್ದರು ಈ ಜನಜಂಗುಳಿಯ ನಡುವೆ ಬಶೀರ್ ಸಾಬಿಯು ಗಂಧ ಮಾರುವವರನ್ನಕಣ್ಣ ಸನ್ನೆಯಲ್ಲೇ ಅಂದಾಜಿಸಿ ಹಿಂದಿನ ಬಾಗಿಲಿನ ಕಡೆಗೆ ಕಳುಹಿಸುತ್ತಿದ್ದ. ಹಿಂದಿನ ಬಾಗಿಲಲ್ಲೇ ಎಲ್ಲದಂದೆ ನಡೆಯುತ್ತಿತ್ತು.

ಕವಿತಾಳ್ಗೆ ಅನುಮಾನ ಹೆಚ್ಚಾಗುತ್ತಾ ಹೋಯಿತು. ಮೆಲ್ಲನೆ ಹಿಂದೆ ತಿರುಗಿ ನೋಡಿದಳು ತಮ್ಮನ್ನು ಯಾರೋ ಹಿಂಬಾಲಿಸಿ ಬರುತ್ತಿರುವಂತೆ ಅನಿಸಿತು. ತಾನು ನೋಡಿದಾಗ ಆ ವ್ಯಕ್ತಿ ಪಕ್ಕನೆ ಮಾಯವಾದ ರೀತಿ ಆಗುತ್ತಿತ್ತು. ನಾಲ್ಕು ಹೆಜ್ಜೆ ನಡೆದು ಮತ್ತೆ ತಿರುಗಿ ನೋಡುತ್ತಿದ್ದಳು ಆಗಲು ಹಾಗೆ ಆಗುತ್ತಿತ್ತು.
ಬಶೀರ್ ಸಾಬಿಯ ಅಂಗಡಿಯೂ ಹತ್ತಿರಾಗುತ್ತಿತ್ತು.

“ಏನ್ರೀ…”ಅಂದಳು ಮೆಲ್ಲನೆ
“ಏನು?.”ಎಂದ ರಮೇಶ

“ನಮ್ಮನ್ನ ಯಾರು ಹಿಂಬಾಲಿಸ್ತಾ ಇರೋ ಹಾಗೆ ಅನಿಸ್ತಾ ಇದೆ”ಅಂದಳು ಕವಿತಾ

“ಹೌದಾ ನೋಡೋಣ ತಡಿ”ಎಂದು ರಮೇಶ ಮುಂದೆ ಹೆಜ್ಜೆ ಹಾಕಿದ.

ಬಶೀರ್ ಸಾಬಿಯ ಅಂಗಡಿ ಹತ್ತಿರ ಆಗುತ್ತಿತ್ತು ಗೋಪಾಲ ಸ್ವಲ್ಪ ದೂರದಲ್ಲಿ ಇವರನ್ನು ಗಮನಿಸುತ್ತಾ ನಿಂತಿದ್ದ.

ಕವಿತಾಳ ತಲೆಯಲ್ಲಿ ಏನೋ ಹೊಳೆದಂತಾಯ್ತು,
ಶನಿವಾರ ಎಸ್ಟೇಟ್ ನಲ್ಲಿ ಕಳೆ ಹೊಡೆಯುವ ಕೆಲಸಕ್ಕೆ ಹೋಗಿದ್ದಳು.
ಕಳೆ ಹೊಡೆಯುವುದು ಎಂದರೆ ಕಾಫಿ ಏಸ್ಟೇಟ ನ ತೋಟದಲ್ಲಿ ಬೆಳೆದ ಕಳೆ ಗಿಡಗಳನ್ನು ಹೆಂಗಸರು ಉದ್ದನೆಯ ಕತ್ತಿಯಿಂದ ಕಡಿದು ಒಂದೆಡೆ ರಾಶಿ ಹಾಕಿ ಕಾಫಿ ತೋಟವನ್ನು ಸ್ವಚ್ಛ ಮಾಡುತ್ತಿದ್ದರು. ಕಾಫಿ ಹಣ್ಣು ಕೊಯ್ಲು ಮಾಡುವಾಗ ಅನುಕೂಲ ಆಗುವಂತೆ ಮಾಡುತ್ತಿದ್ದರು ಇಲ್ಲವಾದರೆ ಆ ಕಳೆಗಳ ನಡುವೆ ಕಾಫಿ ಹಣ್ಣುಗಳು ಬಿದ್ದಾಗ ಅವುಗಳನ್ನು ಆರಿಸುವುದು ಕಷ್ಟವಾಗುತ್ತಿತ್ತು.

ಹೀಗೆ ಕವಿತಾ ಕಳೆ ಹೊಡೆಯುವಾಗ ಎಸ್ಟೇಟ್ ನ ಒಂದು ತೋಟದಲ್ಲಿ ತೊಟ್ಟಿಲು ಗುಂಡಿಯಲ್ಲಿ ಸುಮಾರು 5 ಗಂಧದ ತುಂಡುಗಳು ಸಿಕ್ಕಿದ್ದವು. ಅದನ್ನು ಸಂಜೆ ಮನೆಗೆ ಬರುವಾಗ ಮೆಲ್ಲನೆ ಕದ್ದು ತಂದಿದ್ದಳು.

“ರೀ ಸ್ವಲ್ಪ ತಡೀರಿ”ಎಂದು ಕವಿತಾ ಬಶೀರ್ ಸಾಬಿಯ ಅಂಗಡಿಯ ಕಡೆಗೆ ಹೋಗುತ್ತಿದ್ದ ರಮೇಶನನ್ನು ತಡೆದಳು.

“ಯಾಕೆ”ಎಂದ ರಮೇಶ
“ಸಂತೆ ಮುಗಿಸಿ ಬರೋಣ ಮೊದಲು” ಅಂದಳು

ರಮೇಶನಿಗೆ ಸರಿಯಾಗಿ ಕವಿತಾಳ ಕೈ ಹಿಡಿದು ಮುಂದ ನಡೆದ.

ಗೋಪಾಲನಿಗೆ ಕವಿತಾ ಹಾಗೂ ರಮೇಶ ಬಶೀರ್ ಸಾಬಿ ಅಂಗಡಿಯ ಮುಂದೆ ನಿಂತಾಗಲೇ ರಮೇಶ ಹಿಡಿದಿರುವ ಬ್ಯಾಗಿನಲ್ಲಿ ಇರುವುದು ಗಂಧ ಎಂದು ದೃಢವಾಗಿತ್ತು.

ಸಂತೆ ಮೈದಾನಕ್ಕೆ ಬರುತ್ತಿದ್ದಂತೆ ಅಲ್ಲಿದ್ದ ಜನ ಸಾಗರವನ್ನು ನೋಡಿ ರಮೇಶ ಹೌಹಾರಿದ್ದ. ಇಷ್ಟೊಂದು ಜನರ ನಡುವೆ ಸಂತೆ ಮುಗಿಸಿ ಹೊರಬರುವುದು ಸಾಧ್ಯವೇ ಎಂದು ಯೋಚಿಸುತ್ತಿರುವಾಗಲೇ ಕವಿತಾ ಸಂತೆಯ ಮೈದಾನದೊಳಗೆ ನುಗ್ಗಿದಳು.

ಕವಿತಾಳ ಕಣ್ಣುಗಳು ಆ ಮುಸುಕು ದಾರಿಯನ್ನೇ ಹುಡುಕುತ್ತಿದ್ದವು ಅವನು ಆಗಾಗ ಕಾಣಿಸಿಕೊಂಡು ಆಗಾಗ ಮರೆಯಾಗುತ್ತಿದ್ದ.

“ಏನ್ ಕವಿತಮ್ಮ ತುಂಬಾ ದಿನಗಳ ನಂತರ ಸಂತಿಗೆ ಬಂದಿರೋ ಹಾಗಿದೆ ಮದುವೆ ಆಯ್ತಂತೆ, ಇವ್ರ್ಯಾರು ಯಜಮಾನ್ರ”ಎಂದು ತರಕಾರಿ ಮಾರುವ ಚಂದ್ರಮ್ಮ ರಮೇಶನನ್ನೇ ನೋಡುತ್ತಾ ಕೇಳಿದಳು.

ಎಲ್ಲೋ ಇದ್ದ ಕವಿತಾಳ ಗಮನ ಚಂದ್ರಮನ ಕಡೆಗೆ ತಿರುಗಿ ಹೌದು ಎಂದಳು ರಮೇಶ ಇವಳ ಕೈಯನ್ನೇ ಹಿಡಿದು ನಿಂತಿದ್ದ.

ಕವಿತಾಳ ಮನಸ್ಸು ಮಾತ್ರ ಚಡಪಡಿಸುತ್ತಲೆ ಇತ್ತು. ಅವಳು ಆ ಮುಸುಕು ದಾರಿಯನ್ನೇ ಹುಡುಕುತ್ತಿದ್ದಳು ಅವಳಿಂದ ಸ್ವಲ್ಪ ದೂರದಲ್ಲಿ ಮತ್ತೆ ಕಾಣಿಸಿಕೊಂಡ ಅವನ ಕಣ್ಣುಗಳು ಇವಳನ್ನೇ ಕೇಂದ್ರೀಕರಿಸಿತ್ತು. ಅವನ ಕಣ್ಣಿನಿಂದ ಏನೋ ಒಂದು ಸನ್ನೆ ಮಾಡಿದಂತೆ ಅನಿಸಿದಾಗ ಕವಿತಾಳ ಕುತೂಹಲ ಹೆಚ್ಚಾಯಿತು.

ಕವಿತಾ ದೈರ್ಯ ತಂದುಕೊಳ್ಳುತ್ತಾ ನಿಂತಿದ್ದಳು ರಮೇಶ ತರಕಾರಿಗಳನ್ನು ತೆಗೆದುಕೊಳ್ಳುವುದರಲ್ಲಿ ನಿರತನಾಗಿದ್ದ.

ಯಾರೋ ಕೈ ಹಿಡಿದು ಎಳೆದಂತಾಯ್ತು, ಕವಿತಾ ಒಮ್ಮೆಲೇ ತಿರುಗಿ ನೋಡಿದಳು. ಗೋಪಾಲ ಕವಿತಾಳ ಬಳಿ ನಿಂತಿದ್ದ, ಕವಿತಾಳ ಆತಂಕ ಹೆಚ್ಚಾಗುತ್ತಿತ್ತು ರಮೇಶನ ಬಳಿ ಹೇಳಿದರೆ ಈ ವಿಷಯ ಗೊಂದಲಕ್ಕೀಡಾಗಬಹುದು ಎಂದು ತಿಳಿದು ಸುಮ್ಮನೆ ನಿಂತಿದ್ದ ಅವಳ ಕೈ ಹಿಡಿದು ಗೋಪಾಲ ಒಮ್ಮೆ ಜೋರಾಗಿ ಎಳೆದ. ಆದರೆ ಇನ್ನೊಂದು ಕೈಯನ್ನು ರಮೇಶ ಗಟ್ಟಿಯಾಗಿ ಹಿಡಿದುದರಿಂದ ಗೋಪಾಲನಾ ಪ್ರಯತ್ನ ವ್ಯರ್ಥವಾಗಿತ್ತು.

ಗೋಪಾಲ ಏನು ಮಾಡಬೇಕು ಎಂದು ಚಿಂತಿಸುತ್ತಾ ನಿಂತಿದ್ದ.

“ಆ ಧರಿದ್ರದೋನು ಅವಳ ಕೈ ಬಿಡುವುದಕ್ಕೆ ಕೇಳ್ತಿಲ್ಲ ಏನ್ ಮಾಡೋದು”
ಎಂದು ರಮೇಶನಿಗೆ ಬೈಯುತ್ತಾ ಕವಿತಾಳನ್ನು ಜನರ ಗುಂಪಿನ ನಡುವೆ ತಪ್ಪಿಸಿಕೊಳ್ಳುವಂತೆ ಮಾಡಲು ಸಕಲ ಪ್ರಯತ್ನ ಪಡುತ್ತಿದ್ದ.

ಕವಿತಾ ಕೂಡ ಒಂದೆರಡು ಬಾರಿ ರಮೇಶನ ಕಣ್ಣು ತಪ್ಪಿಸಿ ಮುಸುಕು ದಾರಿಯ ಕಡೆಗೆ ಹೋಗಲು ಪ್ರಯತ್ನ ಪಟ್ಟಳು, ಆದರೆ ರಮೇಶ ಇವಳನ್ನು ಬಿಡುವ ಹಾಗೆ ಇರಲಿಲ್ಲ. ಕವಿತಾಳಿಗೆ ಕುತೂಹಲ ಭಯ ಎಲ್ಲಾ ಸಮಿಶ್ರವಾಗಿತ್ತು.
ಹೀಗೆ ಪ್ರಯತ್ನ ಮುಂದುವರಿಯುತ್ತಲೆ ಸಂಜೆಯಾಗಿತ್ತು.ಜನದಟ್ಟಣೆಯು ಕಡಿಮೆಯಾಗಿತ್ತು.

ರಮೇಶ ಹಾಗೂ ಕವಿತಾ ತಮ್ಮೆಲ್ಲ ಕೆಲಸವನ್ನು ಮುಗಿಸಿ ಇನ್ನೇನು ಬಶೀರ್ ಸಾಬೀಯ ಅಂಗಡಿ ಕಡೆಗೆ ಹೋಗುತ್ತಿದ್ದರು.

“ಈಗ ಜನ ಅಷ್ಟಿಲ್ಲ”ಎಂದಳು ಕವಿತ

“ಇವತ್ತು ಬೇಡ ಏನೋ ತೊಂದರೆ ಆಗುವಂತಿದೆ”ಎಂದ ರಮೇಶ

“ಇದನ್ನ ನಾವೇ ಹಿಡ್ಕೊಂಡು ತಿರುಗೋಕೆ ಆಗಲ್ಲ ಇವತ್ತೇ ಕೊಟ್ಟುಬಿಡಿ”ಎಂದು ಪರಿಪರಿಯಾಗಿ ಕೇಳಿದರು ರಮೇಶ ಒಪ್ಪಲಿಲ್ಲ ಸೀದಾ ಅವಳನ್ನು ಕರೆದುಕೊಂಡು ಬಂದು ಬಸ್ನಲ್ಲಿ ಕುಳಿತ.

ಕವಿತಾಳ್ಗೆ ಒಂದು ಕಡೆ ರಮೇಶ್ ನ ಮೇಲೆ ಕೋಪ ಬರುತ್ತಿತ್ತು ಸುಮ್ಮನೆ ಅಲ್ಲೇ ಕೊಟ್ಟಿದ್ದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತಿತ್ತು ಇದನ್ನು ಹಿಡ್ಕೊಂಡು ಮತ್ತೆ ಎಸ್ಟೇಟ್ ಗೆ ಹೋಗೋದು ತಪ್ಪು ಎನಿಸಿತು.

ಇತ್ತ ರಾಜಪ್ಪ ಗೋಪಾಲ ಹಾಗೂ ರಾಮಣ್ಣ ತಮ್ಮ ಉಪಾಯ ಹಾಳಾದ ಚಿಂತೆಯಲ್ಲಿ ಶಾಂತಲ ಬಾರ್ ಒಳಗೆ ಕುಳಿತು ಕುಡಿಯುತ್ತಾ ಕುಳಿತಿದ್ದರು.

“ಅಲ್ಲಾ ಅಣ್ಣ ಅವನು ಹೆಂಡತಿ ಕೈಯನ್ನ ಬಿಡೋಕೆ ಕೇಳ್ತಿಲ್ಲ”ಎಂದ ಗೋಪಾಲ ಕೋಪದಲ್ಲಿ

“ಈಗ ಏನು ಮಾಡೋದು”ಎಂದು ರಾಮಣ್ಣ ತಲೆಯ ಮೇಲೆ ಕೈ ಹಿಡಿದು ಕುಳಿತ.

“ಅವನ ಕೊಂದಾದ್ರೂ ತರ್ತೀನಿ”ಅಂದ ಗೋಪಾಲ

ಸಮಯವಾದ ಕಾರಣ ಮೂವರು ಬಾರ್ನಿಂದ ಬಸ್ ನ ಕಡೆಗೆ ಬಂದರು. ಒಳಗೆ ಕುಳಿತಿದ್ದ ರಮೇಶ ಹಾಗೂ ಕವಿತಾರನ್ನು ನೋಡಿದ ಗೋಪಾಲ ಹಲ್ಲು ಕಡಿಯುತ್ತಿದ್ದ. ರಾಮಣ್ಣ ಡ್ರೈವರ್ ಸೀಟ್ ಅಲ್ಲಿ ಕುಳಿತ. ರಾಜಪ್ಪ , ರಮೇಶ ಹಾಗೂ ಕವಿತಾ ಕುಳಿತಿದ್ದ ಹಿಂದಿನ ಸೀಟ್ನಲ್ಲಿ ಬಂದು ಕುಳಿತ.

ರಾಮಣ್ಣ ಬಸ್ಸನ್ನು ಮುಂದೆ ಚಲಾಯಿಸಿದ. ಕುಡಿದ ಅಮಲು ಹಾಗೂ ಅವನ ಸಮಸ್ಯೆಯ ತೊಳೆದು ಆಟ ತಾನು ಹೀಗೆ ಏನು ಮಾಡಬೇಕು ಎಂಬುದೇ ಗೊತ್ತಾಗದೆ ಯಾವುದೋ ಯೋಚನೆಯಲ್ಲಿ ಬಸ್ಸನ್ನು ಚಲಾಯಿಸುತ್ತಿದ್ದ.

ಸುತ್ತಲೂ ಕತ್ತಲು ಆವರಿಸಿತ್ತು , ಬಸ್ ತುಂಬೆಲ್ಲ ಜನ ಇದ್ದರು. ಗೋಪಾಲ ಟಿಕೆಟ್ ನೀಡುವಾಗ ರಮೇಶ್ ಹಿಡಿದಿದ್ದ ಬ್ಯಾಗನ್ನೆ ನೋಡಿದ ಮಾಲು ಹಾಗೆ ಇತ್ತು. ಗೋಪಾಲ ಎಲ್ಲರಿಗೂ ಟಿಕೆಟ್ ಹಂಚಿ ಡ್ರೈವರ್ ಸೀಟಿನ ಪಕ್ಕದ ಒಂದು ಸೀಟ್ನಲ್ಲಿ ಕುಳಿತ.

ರಾಮಣ್ಣನ ಕಡೆಗೆ ನೋಡಿದ ಗೋಪಾಲ, ರಾಮಣ್ಣನ ಕಣ್ಣಿನಲ್ಲಿ ನೀರು ಜನಗುತ್ತಿತ್ತು ತನ್ನ ಮಗಳ ಅಳಿವು ಉಳಿವಿನ ಪ್ರಶ್ನೆ. ದುಃಖದಿಂದಲೇ ಗೋಪಲನ ಕಡೆಗೆ ತಿರುಗಿದ್ದ ರಾಮಣ್ಣ. ಗೋಪಾಲನ ಕೋಪ ನೆತ್ತಿಗೆರಿತ್ತು.

ಬಸ್ಸು ಮೇಗುರು ದಾಟಿ ಎಸ್ಟೇಟ್ ನ ದಾರಿಯಲ್ಲಿ ಹೊರಟಿತ್ತು ಸುತ್ತಲೂ ದಟ್ಟ ಕತ್ತಲ ಆವರಿಸಿತ್ತು.

ರಮೇಶನಿಗೆ ರಾಚಪ್ಪ ತನ್ನನ್ನು ಹಿಂಬಾಲಿಸುವ ವಿಷಯ ಸುತ್ತೂರಿನಲ್ಲೇ ತಿಳಿದ ಕಾರಣ ಕವಿತಾಳನ್ನು ಒತ್ತಾಯ ಮಾಡಿ ಬಸ್ ಹತ್ತಿಸಿದ್ದ. ಕವಿತಾಳ ಭಯ ಹೆಚ್ಚಾಗುತ್ತಿತ್ತು ತನ್ನ ಹಿಂದೆ ಕುಳಿತ ವ್ಯಕ್ತಿ ಏನು ಮಾಡುವನು ಎಂದು ಭಯದಿಂದ ನಡುಗುತ್ತಿದ್ದಳು.

ಗೋಪಾಲ ನಿಧಾನವಾಗಿ ಡ್ರೈವರ್ ಸೀಟ್ ಹಿಂದೆ ಇದ್ದ ಟೂಲ್ಸ್ ಬಾಕ್ಸ್ ಒಳಗೆ ಕೈ ಹಾಕಿದ, ಒಂದು ಚಾಕು ಸಿಕ್ಕಿತ್ತು ಮೆಲ್ಲನೆ ಯಾರ ಗಮನಕ್ಕೂ ಬಾರದಂತೆ ತೆಗೆದು ಕಿಸೆಗೆ ಇಳಿಸಿದ್ದ ರಾಮಣ್ಣನ ಕಡೆಗೆ ನೋಡಿದ ರಾಮಣ್ಣ ಯಾವುದೋ ಚಿಂತೆಯಲ್ಲಿ ದಾರಿಯನ್ನೇ ನೋಡುತ್ತಾ ಬಸ್ಸು ಓಡಿಸುತ್ತಿದ್ದ.

ಗಂಗೆಗಿರಿ ಹತ್ತಿರ ಬರುತ್ತಿತ್ತು ಗೋಪಾಲ ಸೀಟ್ನಿಂದ ಎದ್ದು ಮೆಲ್ಲನೆ ರಮೇಶ ನನ್ನೇ ಎದುರು ದುರುಗುಟ್ಟಿ ನೋಡುತ್ತಾ ರಮೇಶನ ಕಡೆಗೆ ನಡೆಯುತ್ತಾ ಬರುತ್ತಿದ್ದ. ಅವನ ಮನಸ್ಸಿನಲ್ಲಿ ಇವತ್ತು ರಮೇಶನನ್ನು ಕೊಲ್ಲಲೇ ಬೇಕೆಂಬ ಹಠ ಕಾಣುತ್ತಿತ್ತು.

ಕವಿತಾ ಗೋಪಾಲನನ್ನು ನೋಡಿದಳು. ಯಾಕೋ ಇಲ್ಲೇನು ಸರಿ ಬರುತ್ತಿಲ್ಲ ಹೊರಗೆ ನೋಡಿದರೆ ಬರೀ ಕತ್ತಲು. ಬಸ್ನ ಒಳಗೆ ಮಂದ ಬೆಳಕಿನಲ್ಲಿ ಗೋಪಾಲನ ಮುಖದಲ್ಲಿದ್ದ ಕೋಪವನ್ನು ಕವಿತಾ ಗುರುತಿಸಿದ್ದಳು.
ಇಲ್ಲಿ ನಿಜವಾಗಲೂ ಏನೋ ಒಂದು ಸಂಭವ ನಡೆಯುವುದು ಖಚಿತ ಎಂದು ತಿಳಿದು ಮೆಲ್ಲನೆ ರಮೇಶನಿಗೆ ತಿಳಿಸಲು ಅವನ ಕಡೆಗೆ ವಾಲಿದಳು.

ಅಷ್ಟರಲ್ಲಿ ಗೋಪಾಲ ರಮೇಶನ ಹತ್ತಿರಾಗಿದ್ದ. ಗಂಗೆಗಿರಿ ಎಸ್ಟೇಟ್ ನ ತಿರುವಿನಲ್ಲಿತ್ತು ಬಸ್ಸು. ಕವಿತಾಳ ಹೃದಯ ಬಡಿತ ಹೆಚ್ಚಾಗುತ್ತಿತ್ತು
ರಮೇಶ ಮಾತ್ರ ಇವನ್ಯಾಕೆ ನನ್ನನ್ನು ಹೀಗೆ ದುರ್ಗುಟ್ಟಿ ನೋಡುತ್ತಿದ್ದಾನೆ ಎಂಬ ಕುತೂಹಲದಲ್ಲಿ ರಮೇಶ್ ಗೋಪಾಲನ ಕಡೆಗೆ ನೋಡುತ್ತಿದ್ದ.
ಗೋಪಾಲ ತನ್ನಕಿಸಿ ಒಳಗೆ ಕೈಹಾಕಿ ಚಾಕುವನ್ನು ಹೊರ ತೆಗೆದಿದ್ದ ರಮೇಶನ ಎದೆಗೆ ಗುರಿಯಾಗಿಸಿ ಚುಚ್ಚಿದ್ದ. ಇದನ್ನು ನೋಡುತ್ತಿದ್ದ ಪಕ್ಕದ ಒಂದು ಸೀಟ್ನಲ್ಲಿ ಕುಳಿತಿದ್ದ ಮಹಿಳೆ ಜೋರಾಗಿ ಬೊಬ್ಬೆ ಹಾಕಿದಳು.

ಬೊಬ್ಬೆ ಕೇಳಿ, ತನ್ನ ಮಗಳ ಚಿಂತೆಯಲ್ಲಿ ಮುಳುಗಿದ್ದ ರಾಮಣ್ಣ ತಿರುವಿನ ರಸ್ತೆಯ ಪಕ್ಕದಲ್ಲಿ ಇದ್ದ ಕಲ್ಲಿನ ಮೇಲೆ ಬಸ್ಸನ್ನು ಹತ್ತಿಸಿದ್ದ. ಬಸ್ಸು ಕಣಿವೆ ಗೆ ಇಳಿದಿತ್ತು,
ಸರ ಸರ ನೆ ಬಸ್ಸು ಇಳಿಜಾರಿನಲ್ಲಿ ಜಾರುತ್ತ ಹೋಗುತ್ತಿತ್ತು. ಇದೇ ಸರಿಯಾದ ಸಮಯ ಎಂದು ರಾಜಪ್ಪ ರಮೇಶನ ಕೈಯಲ್ಲಿದ್ದ ಬ್ಯಾಗನ್ನು ಹಿಡಿದು ಬಸ್ನಿಂದ ಹೊರಗೆ ಹಾರಿದ್ದ.
ಬಸ್ಸ ಜಾರುತ್ತ ಜಾರುತ್ತ ಒಂದು ದೊಡ್ಡ ಬೀಟೇ ಯ ಮರಕ್ಕೆ ತಾಗಿ ನಿಂತಿತ್ತು.

ಮಾರನೆಯ ದಿನ,

ರಮೇಶನ ಮನೆ ಮುಂದೆ ಜನ ತುಂಬಿಕೊಂಡಿದ್ದರು. ರಮೇಶ ಒಂದು ಕುರ್ಚಿಯಲ್ಲಿ ತಲೆಭಾಗಿಸಿ ಕುಳಿತಿದ್ದ. ಅವನ ಕಣ್ಣಿನಿಂದ ಒಂದೊಂದೇ ಕಣ್ಣೀರ ಹನಿಗಳು ಅವನ ಪಾದಕ್ಕೆ ಬೀಳುತ್ತಿತ್ತು ಕವಿತಾಳ ಹೆಣವನ್ನು ಅವನು ಕುಳಿತಲ್ಲಿಂದ ಸ್ವಲ್ಪ ದೂರದಲ್ಲಿ ಮಲಗಿಸಿದ್ದರು.

ಸಂಬಂಧಿಕರ ಗೋಳಾಟದ ನಡುವೆಯೂ ರಮೇಶನ ದುಃಖ ಮೌನವಾಗಿ ಪರಿವರ್ತನೆಯಾಗಿತ್ತು. ಮನಸ್ಸು ಹಿಂದಿನ ದಿನ ರಾತ್ರಿ ಬಸ್ಸಿನಲ್ಲಿ ನಡೆದ ಘಟನೆಯನ್ನೇ ನೆನೆಯುತ್ತಿತ್ತು.

ಗೋಪಾಲ ಬಂದು ರಮೇಶನ ಬಳಿ ನಿಂತದ್ದು. ರಮೇಶನನ್ನೇ ದುರುಗುಟ್ಟಿ ನೋಡುತ್ತಿದ್ದ ಗೋಪಾಲ ಚಾಕು ತೆಗೆದು ರಮೇಶನಿಗೆ ಚುಚ್ಚುವುದಕ್ಕೂ, ಆ ಹೆಂಗಸು ಕೂಗಿದ್ದಕ್ಕೂ, ರಾಮಣ್ಣನ ಬಸ್ಸಿನ ಒಂದುಚಕ್ರ ಕಲ್ಲಿನ ಮೇಲೆ ಹತ್ತಿ ಒಂದು ಸೈಡಿಗೆ ವಾಲಿದಕ್ಕೂ, ಕವಿತಾ ರಮೇಶನ ಬಳಿ ಏನೋ ಹೇಳಲು ರಮೇಶನ ಬಳಿಗೆ ವಾಲಿದಕ್ಕೂ, ಈ ಎಲ್ಲಾ ಘಟನೆಗಳು ಏಕಕಾಲದಲ್ಲಿ ಜರುಗಿ ಗೋಪಾಲ ಇರಿದ ಚೂರಿಯ ಗುರಿ ರಮೇಶನನ್ನು ತಪ್ಪಿ ಕವಿತಾಳ ಕುತ್ತಿಗೆಯ ಭಾಗಕ್ಕೆ ಬಿದ್ದು ಕವಿತಾ ಅಲ್ಲೇ ಉಸಿರು ಚೆಲ್ಲಿದಳು.

ಬಸ್ ಕಣಿವೆಯ ದಿಕ್ಕಿಗೆ ಜಾರುತ್ತ ಹೋಗಿ ಬೀಟೆಯ ಮರಕ್ಕೆ ತಾಗಿ ನಿಂತಾಗ ಬಸ್ನ ಒಳಗಿದ್ದ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತೆ ಹೊರತು ಬೇರೇನೂ ಆಗಿರಲಿಲ್ಲ. ಅಲ್ಲಿದ್ದವರೆಲ್ಲ ಸೇರಿ ಗೋಪಾಲನನ್ನು ಹಿಡಿದು ಸರಿಯಾಗಿ ಹೊಡೆದು ಮೇಗೂರಿನ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಇದೆಲ್ಲವೂ ಸರಿ ಆದರೆ ಗೋಪಾಲ ಯಾಕೆ ನನ್ನನ್ನು ಕೊಲ್ಲಲು ಬಂದ. ನನ್ನ ಮೇಲೆ ಹೆಗತನ ಇದ್ದದ್ದು ರಾಜಪ್ಪನಿಗೆ ಮಾತ್ರ. ರಾಜಪ್ಪನೇ ಗೋಪಾಲನ ಬಳಿ ಹೇಳಿ ನನ್ನನ್ನು ಕೊಲ್ಲಿಸಲು ಕಳುಹಿಸಿದ್ದ ಎಂದುಕೊಳ್ಳೋಣವೆಂದರೆ ರಾಜಪ್ಪನಿಗೂ ಗೋಪಾಲನೆಗೂ ಏನು ಸಂಬಂಧ. ಹೀಗೆ ರಮೇಶನ ತಲೆಯಲ್ಲಿ ಪ್ರಶ್ನೆಗಳ ಸುರಿಮಳೆಯೆ ಸುರಿದರು ಉತ್ತರ ಮಾತ್ರ ಒಂದಕ್ಕೂ ಸಿಗುತ್ತಿರಲಿಲ್ಲ ಆದರೆ ಆ ಘಟನೆಯ ಹಿಂದೆ ಇದ್ದ ಕಥೆಯೇ ಬೇರೆ.

ಕವಿತಾ ಪ್ರೀತಿಸುತ್ತಿದ್ದ ಆ ಚಿಗುರು ಮೀಸೆ ಹುಡುಗ ಬೇರ್ಯಾರು ಅಲ್ಲ ಗೋಪಾಲನೆ, ಕವಿತಾ ರಮೇಶನನ್ನು ಮದುವೆಯಾದಗಿನಿಂದ ಗೋಪಾಲನಿಗೆ ರಮೇಶನ ಮೇಲೆ ಅತೀವಕೋಪ ಹೊಂದಿರುತ್ತಾನೆ. ಆದರೆ ಏನು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಅವನದು.

ಒಮ್ಮೆ ಎಲ್ಲರ ಕಣ್ಣು ತಪ್ಪಿಸಿ ಗೋಪಾಲ ಕವಿತಾಳನ್ನು ಭೇಟಿಯಾಗಿದ್ದ. ಕವಿತಾಳಿಗೂ ರಮೇಶನ ಜೊತೆಗೆ ಬಾಳುವ ಮನಸ್ಸು ಇರಲಿಲ್ಲ

“ನನ್ನನ್ನು ಹೇಗಾದರೂ ಮಾಡಿ ಇಲ್ಲಿಂದ ಕರೆದುಕೊಂಡು ಹೋಗು”ಎಂದಿದ್ದಳು ಕವಿತಾ
ಆದರೆ ಖಾಲಿ ಜೇಬಿನ ರಾಜನಾಗಿದ್ದ ಗೋಪಾಲನಿಗೆ ಕವಿತಾಳನ್ನು ಕರೆದುಕೊಂಡು ಹೋಗಿ ದೂರದ ಊರಿನಲ್ಲಿ ನೆಲೆಸುವಷ್ಟು ಹಣ ಅವನ ಬಳಿ ಇರಲಿಲ್ಲ.

ಹೀಗಿರುವಾಗಲೇ ರಾಮಣ್ಣ ಹಾಗೂ ರಾಜಪ್ಪ ಸೇರಿ ಮಾಡಿದ ಗಂಧ ಕದಿಯುವ ಉಪಾಯಕ್ಕೆ ಗೋಪಾಲನು ಕೈ ಸೇರಿಸಿದ ಗಂಧ ಕಡಿಯುವ ಎಲ್ಲಾ ಸಮಯದಲ್ಲೂ ಅವರ ಜೊತೆ ನಿಂತಿದ್ದ

ಹಿಂದಿನ ಶನಿವಾರದ ದಿನ ಬೆಳಿಗ್ಗೆ ಗೋಪಾಲ ಮತ್ತೆ ಎಲ್ಲರ ಕಣ್ಣು ತಪ್ಪಿಸಿ ಕವಿತಾಳನ್ನು ಭೇಟಿಯಾದ. ತಾವು ಗಂಧ ಬಚ್ಚಿಟ್ಟಿದ್ದ ಸ್ಥಳವನ್ನು ಕವಿತಾಳಿಗೆ ತಿಳಿಸಿದ್ದ. ಕವಿತಾ ಗಂದ ಕದ್ದು ಭಾನುವಾರ ಸಂತೆಗೆ ತೆಗೆದುಕೊಂಡು ಬರಬೇಕು ಅಲ್ಲಿ ರಮೇಶನ ಕಣ್ಣು ತಪ್ಪಿಸಿ ಕವಿತಾ ಹಾಗೂ ಗೋಪಾಲ ಗಂಧವನ್ನು ಬಶೀರ್ ಸಾಬಿಗೆ ಮಾರಿ ಹಣ ಹಿಡಿದುಕೊಂಡು ಅಲ್ಲಿಂದ ಊರು ಬಿಡುವುದು ಅವರ ಉಪಾಯವಾಗಿತ್ತು.

ಶನಿವಾರ ಸಂಜೆ ಮನೆಗೆ ಬಂದ ಕವಿತಾ ರಮೇಶನ ಬಳಿ ಇವತ್ತು ಕಳೆ ಹೊಡೆಯುವಾಗ ತೊಟ್ಟಿಲು ಗುಂಡಿಯಲ್ಲಿ ಗಂಧ ಸಿಕ್ಕಿತೆಂದು ಹೇಳಿದಳು. ರಮೇಶನಿಗೆ ಇದು ರಾಜಪ್ಪ ಬಚ್ಚಿಟ್ಟ ಗಂಧವೆಂದು ಗೊತ್ತಾದರೂ ಅವನೇನು ಮಾಡ್ಕೋತಾನೆ ಎಂಬ ಧೈರ್ಯದಲ್ಲಿ ನಾಳೆ ಭಾನುವಾರ ಸಂತೆಯಲ್ಲಿ ಮಾರೋಣ ಎಂದು ಹೇಳಿದ. ಬಸ್ನಲ್ಲಿ ರಾಜಪ್ಪ ಇವನನ್ನೇ ದುರುಗುಟ್ಟಿ ನೋಡುತ್ತಿದ್ದದ್ದು ಅದಕ್ಕೆ ಎಂದು ರಮೇಶನಿಗೆ ತಿಳಿದಿತ್ತು.

ಸುತ್ತೂರಿನಲ್ಲಿ ಬಸ್ ಇಳಿದು ಬಶೀರ್ ಸಾಬಿಯ ಅಂಗಡಿಯ ಮುಂದೆ ಕವಿತಾ ಹಾಗೂ ರಮೇಶ ಹೋಗುತ್ತಿದ್ದಾಗ ಮುಸುಕು ಹಾಕಿಕೊಂಡು ತನ್ನನ್ನು ಹಿಂಬಾಲಿಸುತ್ತಿರುವುದು ಗೋಪಾಲನೆ ಎಂದು ಕವಿತಾಳಿಗೆ ತಿಳಿದಿತ್ತು ಆದರೆ ಅವಳು ರಮೇಶ ಆಗ ಗಂಧ ಮಾರುವುದು ಬೇಡ ಎಂದ ಹೇಳಿದ್ದು, ಇವರನ್ನೇ ಹಿಂಬಾಲಿಸಿ ಕೊಂಡು ಬರುತ್ತಿದ್ದ ರಾಜಪ್ಪ ಹಾಗೂ ರಾಮಣ್ಣನನ್ನು ಕವಿತಾ ಗಮನಿಸಿದ ಕಾರಣ ಈಗೇನಾದ್ರೂ ಗಂಧ ಮಾರಿದರೆ ಆ ಹಣ ರಾಜಪ್ಪ ಹೇಗಾದರೂ ಮಾಡಿ ತೆಗೆದುಕೊಳ್ಳುತ್ತಾನೆ ಎಂಬ ಭಯದಲ್ಲಿ.

ಸಂತೆಯ ಮೈದಾನದಲ್ಲೂ ಗೋಪಾಲನನ್ನೇ ಹುಡುಕುತ್ತಿದ್ದಳು ಕವಿತಾ. ಒಮ್ಮೆ ನೋಡಿ ಅವನು ಕಣ್ಣ ಸನ್ನೆಯಲ್ಲಿ ಈಗ ತಯಾರಾಗಿರು ಎಂದು ತಿಳಿಸಿದ್ದ. ಹಾಗೂ ಕವಿತಾಳ ಬಳಿ ಬಂದು ಅವಳ ಕೈ ಹಿಡಿದು ಎಳೆದಿದ್ದ ಆದರೆ ಇನ್ನೊಂದು ಕೈಯನ್ನು ರಮೇಶ ಹಿಡಿದುದರಿಂದ ಗೋಪಾಲನ ಪ್ರಯತ್ನ ವಿಫಲವಾಗಿತ್ತು.

ಕವಿತಾಳು ಕೂಡ ಹಲವು ಬಾರಿ ರಮೇಶನ ಕಣ್ಣು ತಪ್ಪಿಸಿ ಗೋಪಾಲನ ಬಳಿ ಹೋಗಲು ಪ್ರಯತ್ನಿಸಿದ್ದಳು ಅದು ಕೂಡ ವಿಫಲವಾಯಿತು

ಸಂಜೆ ವಾಪಸು ಬಸ್ಸಿನ ಬಳಿ ಬರುವಾಗ ಕವಿತಾ ರಮೇಶನಿಗೆ ಕೊನೆ ಕ್ಷಣದವರೆಗೂ ಗಂದ ಮಾರುವಂತೆ ಒತ್ತಾಯಿಸುತ್ತಿದ್ದ ಕಾರಣವೆಂದರೆ ಆಗಲಾದರೂ ಒಂದು ದಾರಿ ಕಾಣಬಹುದೆಂಬ ಆಸೆಯಲ್ಲಿ ಅದು ಕೂಡ ನೆರವೇರಲಿಲ್ಲ

ಇವರಿಬ್ಬರ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು.
ಗೋಪಾಲನಿಗೆ ತನ್ನಸೋಲನ್ನುಅರಗಿಸಿಕೊಳ್ಳಲಾಗಲಿಲ್ಲ. ರಾತ್ರಿ ಬಸ್ ನಲ್ಲಿ ಎಲ್ಲರಿಗೂ ಟಿಕೆಟ್ ಕೊಟ್ಟು ಡ್ರೈವರ್ ಸೀಟಿನ ಪಕ್ಕದಲ್ಲಿ ಕುಳಿತಿದ್ದ ಗೋಪಾಲ ಕವಿತಾ ಹಾಗೂ ರಮೇಶನನ್ನೇ ನೋಡುತ್ತಿದ್ದ. ಸದಾ ಕವಿತಾಳ ಕೈ ಹಿಡಿದು ಕುಳಿತಿದ್ದ ರಮೇಶನನ್ನು ನೋಡಿದಾಗ ಗೋಪಾಲನ ಹೃದಯಕ್ಕೆ ಚೂರಿ ಇರಿದ ಹಾಗಾಗುತ್ತಿತ್ತು.

ಮಾನವನ ಬುದ್ಧಿ ಅತಿಯಾದ ಸಂತೋಷದಲ್ಲಿ ಹಾಗೂ ಅತಿಯಾದ ದುಃಖದಲ್ಲಿ,ಕೋಪದಲ್ಲಿ, ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ ಗೋಪಾಲನಿಗೆ ಆದದ್ದು ಅದೇ. ಚಾಕು ಹಿಡಿದು ಗೋಪಾಲ ಮೆಲ್ಲನೆ ರಮೇಶನ ಬಳಿ ಬಂದಿದ್ದ.

ಹೇಗಾದರೂ ಮಾಡಿ ಇವತ್ತು ರಮೇಶನನ್ನು ಕೊಂದಾದ್ರೂ ಸರಿಯೇ ಕವಿತಾಳನ್ನು ಇಲ್ಲಿಂದ ಕರೆದುಕೊಂಡು ಹೋಗಲೇಬೇಕು. ಎಂದುಕೊಂಡಿದ್ದ ಗೋಪಾಲ, ಆಗಲು ಕವಿತಾ ರಮೇಶನ ಗಮನ ಗೋಪಾಲನ ಮೇಲೆ ಹೋಗದಂತೆ ಏನೋ ಒಂದು ವಿಷಯ ಹೇಳುವ ನೆಪದಲ್ಲಿ ರಮೇಶನ ಕಡೆಗೆ ವಾಲಿ ರಮೇಶನ ಗಮನ ತನ್ನತ್ತ ಬರುವಂತೆ ಮಾಡಿದ್ದಳು ಗೋಪಾಲನಿಗೆ ಅನುಕೂಲ ಆಗಲಿ ಎಂದು.

ರಮೇಶನಿಗೆಂದು ಗೋಪಾಲ ಚಾಕು ಹಾಕಿದ್ದ ಆದರೆ ದೇವರ ಆಟವೋ ಗೋಪಾಲನ ದುರದೃಷ್ಟವೋ ಅದು ತಪ್ಪಿ ಕವಿತಾಳಿಗೆ ಬಿದ್ದಿತ್ತು. ಅವಳು ಉಸಿರು ಅಲ್ಲೇ ನಿಂತಿತ್ತು. ಈ ಆಘಾತವನ್ನು ಯೋಚಿಸಿರದ ಗೋಪಾಲ ಅಲ್ಲೇ ಸ್ಥಬ್ಧ ನಾಗಿ ನಿಂತಿದ್ದ. ಹಾಗಾಗಿ ಎಲ್ಲರೂ ಸೇರಿ ಅವನನ್ನು ಹಿಡಿದು ಹೊಡೆದು ಪೊಲೀಸರಿಗೆ ಒಪ್ಪಿಸಲು ಸಾಧ್ಯವಾಗಿದ್ದು. ಇಲ್ಲದಿದ್ದರೆ ಗೋಪಾಲ ರಾಜಪ್ಪನ ರೀತಿ ಹಾರಿ ತಪ್ಪಿಸಿಕೊಳ್ಳಬಹುದಿತ್ತು.

ರಾಜಪ್ಪ ಬಸ್ ನಿಂದ ಹಾರಿದವನು ಗಂಧದ ಬ್ಯಾಗನ್ನು ಹಿಡಿದು ಓಡಿದ್ದ. ತಾನು ಸತ್ತರೂ ಪರವಾಗಿಲ್ಲ ಈ ಗಂದ ಮಾರಿದ ಹಣ ರಾಮಣ್ಣನ ಮಗಳ ಚಿಕಿತ್ಸೆಗೆ ಕೊಡಲೇಬೇಕು ಎಂಬ ಆಸೆ ಹೊಂದಿದ್ದ ರಾಜಪ್ಪ.

ರಾಮಣ್ಣನಿಗೆ ಕವಿತಾ ಹಾಗೂ ಗೋಪಾಲರ ವಿಷಯ ಮೊದಲೇ ಗೊತ್ತಿದ್ದರೂ, ತನ್ನ ಜೊತೆಗೆ ಇದ್ದ ಗೋಪಾಲ ತನಗೆ ಮೋಸ ಮಾಡಿ ಓಡಿ ಹೋಗುವ ಉಪಾಯದಲ್ಲಿದ್ದ ಎಂದು ಗೊತ್ತಾಗಲಿಲ್ಲ ತನ್ನ ಮಗಳ ಉಳಿವಿಗಾಗಿ ರಮೇಶನನ್ನು ಕೊಲ್ಲಲು ಹೋಗಿ ಹೀಗೆ ಮಾಡಿಕೊಂಡ ಎಂಬ ಚಿಂತೆಯಲ್ಲಿ ಕುಳಿತಿದ್ದ.

ಪೊಲೀಸ್ ಸ್ಟೇಷನ್ನಲ್ಲಿ ಗೋಪಾಲ ಕವಿತಾಳನ್ನು ಕೊಂದದ್ದು ತನ್ನ ಹಳೆಯ ಪ್ರೇಮದ ಕಾರಣದಿಂದಾಗಿ ಎಂದು ಒಪ್ಪಿಕೊಂಡ ಆದರೆ ಗಂಧದ ವಿಷಯ ಎಲ್ಲೂ ಬಾಯಿ ಬಿಡಲಿಲ್ಲ.

ಮಾನವನ ಜೀವನವೇ ಹಾಗೆ ತನ್ನ ಜೀವನದಲ್ಲಿ ಮುಂದೆ ಘಟಿಸುವ ಎಲ್ಲಾ ಘಟನೆಗಳು ಹಿಂದೆ ನಡೆದ ಕೆಲವೊಂದು ಘಟನೆಗಳ ಫಲ. ಇಲ್ಲಿ ನಡೆದ ಪ್ರತಿಯೊಂದು ಘಟನೆಯು ಮುಂದಿನ ಇನ್ನೊಂದು ಘಟನೆಗೆ ಕಾರಣವಾಗಿತ್ತು. ಕೆಲವೊಂದು ಘಟನೆಗಳು ಒಳಿತನ್ನು ಮಾಡಬಹುದು ಇನ್ನು ಕೆಲವು ಕೆಡುಕನ್ನು ಮಾಡಬಹುದು ಆದರೆ ಹಿಂದೆ ನಡೆದ ಘಟನೆಯ ಫಲ ಮುಂದೆ ಸಿಗುವುದಂತೂ ಖಚಿತ.

ಕೆಲವೊಮ್ಮೆ ನಮ್ಮ ಸುತ್ತಮುತ್ತಲು ಹಲವಾರು ವಿಷಯಗಳು ನಡೆದರು ಅವು ನಮ್ಮ ಅರಿವಿಗೆ ಬರುವುದಿಲ್ಲ ರಮೇಶನದು ಈಗ ಅದೇ ಪರಿಸ್ಥಿತಿ.
ತನ್ನನ್ನು ಬಿಟ್ಟು ಬೇರೆಯವರೊಂದಿಗೆ ಓಡಿಹೋಗಿ ಬಾಳಲು ಸಿದ್ದಳಾಗಿದ್ದಳೆಂದು ತಿಳಿಯದ ರಮೇಶ ಕವಿತಾಳ ಸಾವಿನ ಅಗಲಿಕೆಯ ಚಿಂತೆಯಲ್ಲಿ ಅವಳ ಜೊತೆಗೆ ಬೆಂಕಿ ಇಟ್ಟಿದ್ದ.

Leave a Reply

Your email address will not be published. Required fields are marked *

Back