ಎಂದಿನಂತೆ ರಾಜ ವಿಕ್ರಮಾದಿತ್ಯ ಹೆಣವನ್ನು ಹುಡುಕುತ್ತಾ ಕಗ್ಗತ್ತಲ ದಟ್ಟಡವಿಯಲ್ಲಿ ಹೊರಟಿದ್ದ. ದೂರದಲ್ಲಿ ಒಂದು ಮರಕ್ಕೆ ಜೋತು ಬಿದ್ದ ಹೆಣವನ್ನು ನೋಡಿದ. ಅದನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿಕೊಂಡು ಸ್ವಲ್ಪ ದೂರ ಬಂದಾಗ ಬೇತಾಳ ಗಹಗಹಿಸಿ ನಗಲಾರಂಬಿಸಿತು. ರಾಜನಿಗೆ ಬೇತಾಳ ತಾನು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ಹೇಳಿದರೆ ಮಾತ್ರ ರಾಜನ ದಾರಿ ಸುಗಮವಾಗುವುದೆಂದು, ತಪ್ಪು ಉತ್ತರ ನೀಡಿದರೆ ತಲೆ ಒಡೆದು ನೂರು ಚುರುಗಳಾಗುವುದೆಂದು ಹೇಳಿ ಕಥೆ ಶುರು ಮಾಡಿದ.
ಅದೊಂದು ಗಿಡುಗ ಹಸಿವಿನಿಂದ ತುಂಬಾ ಬಳಲಿತ್ತು. ತನ್ನ ಕೊಕ್ಕಿಗೆ ಗಾಯವಾದಾಗಿನಿಂದ ಯಾವ ಆಹಾರವು ಸೇವಿಸಲು ಸಾಧ್ಯವಿಲ್ಲದಂತಾಗಿ ಒಂದು ವಾರದ ವರೆಗೆ ತನ್ನ ಹಸಿವನ್ನು ತಡೆದುಕೊಂಡು ಬದುಕಿತ್ತು ಆ ಜೀವ. ಅದರ ಕೊಕ್ಕಿನ ಗಾಯ ಈಗ ಸ್ವಲ್ಪ ಗುಣವಾಗಿತ್ತು. ಆದರೆ ಅದರ ಹಾರುವ ಬಲ ಹಾಗು ಬೇಟೆಯಾಡುವ ಶಕ್ತಿ ಕ್ಷೀಣಿಸಿತ್ತು. ಹಾಗೋ ಹೀಗೋ ಹಾರಿ ಬಂದು ಒಂದು ಮರದ ಮೇಲೆ ಕುಳಿತು ತನಗೆ ಸಿಗಬಹುದಾದ ಬೇಟೆಯ ಮೇಲೆ ತನ್ನ ದೃಷ್ಟಿಯನ್ನು ಹಾಯಿಸಿತ್ತು. ಸುಡುವ ಬಿಸಿಲಿನ ಜಳ ಕ್ಕೇ ಹಾಗು ಹಸಿವಿನಿಂದ ಬಳಲಿದ್ದ ಗಿಡುಗನ ದೃಷ್ಟಿ ಅದ್ಯಾಕೋ ಇಂದು ಮಂಜಾಗಿತ್ತು. ಮೈಲುಗಟ್ಟಲೆ ದೂರದಲ್ಲಿದ್ದ ಬೇಟೆಯನ್ನು ಗುರುತಿಸಿ ತಿನ್ನುತ್ತಿದ್ದ ಗಿಡಗನಿಗೆ ಇಂದು ಬೇಟೆ ಹತ್ತಿರದಲ್ಲಿದ್ದರು ಕಾಣದಂತಾಗಿತ್ತು.ಇಂದೇ ತನ್ನ ಕೊನೆ ದಿನಾ ಇವತ್ತು ಯಾವ ಬೇಟೆಯೂ ಸಿಗದೇ ಹೋದರೆ ತನ್ನ ಸಾವು ನಿಶ್ಚಿತ ಹೀಗಾಗಿ ಆದಷ್ಟು ತನ್ನ ಬಲವನ್ನೆಲ್ಲಾ ಕೇಂದ್ರೀಕರಿಸಿ ಬೇಟೆ ಹುಡುಕಲು ಆರಂಭಿಸಿತು.
ಇಲಿಯೊಂದು ಆಹಾರ ಹುಡುಕುತ್ತಾ ಬಿಲದಿಂದ ಹೊರಗೆ ಬಂದು ಅತ್ತಿಂದಿತ್ತ ಓಡಾಡುತ್ತಾ ಆಹಾರ ಹುಡುಕಲು ಪ್ರಾರಂಭಿಸಿತು. ಅದೊಂದು ಗದ್ದೆಯ ಬಯಲಾದ್ದರಿಂದ ಅಂದು ಇಲಿಗೆ ಏತೇಚ್ಛ ಆಹಾರ. ಯಾವುದನ್ನು ತಿನ್ನುವುದು ಯಾವುದನ್ನು ಬಿಡುವುದು ಎಂಬ ಚಿಂತೆಯಲ್ಲೇ ಅತ್ತಿಂದಿತ್ತ ಓಡಾಡುತ್ತಿತ್ತು. ಸ್ಥಳ ಒಂದೇ ಆದರೆ ಒಬ್ಬರಿಗೆ ಆಹಾರದ ಮಹಾಪೂರವಾದರೆ ಇನ್ನೊಬ್ಬರಿಗೆ ಆಹಾರದ ಅಲಭ್ಯತೆ. ಸುಡು ಬಿಸಿಲಿನ ಜಳಕೆ ಗಿಡುಗ ಇನ್ನು ಹೆಚ್ಚು ಹೊತ್ತು ಈ ಸ್ಥಳದಲ್ಲಿ ಕೂರಲು ಸಾದ್ಯವಿಲ್ಲದ ಹಾರಲು ಸಾಧ್ಯವಿಲ್ಲದ ಸ್ಥಿತಿ ತಲುಪಿತ್ತು. ಆಗಲೇ ಗಿಡುಗ ನ ಕಣ್ಣಿಗೆ ಈ ಇಲಿ ಕಂಡಿತು.
ಇಲಿಯನ್ನೇ ನೋಡುತ್ತಾ ಬೇಟೆಯ ಸರಿಯಾದ ಸಮಯಕ್ಕೆ ಕಾಯುತ್ತಿತ್ತು. ಪದೇ ಪದೇ ಮಂಜಾಗುತ್ತಿದ್ದ ತನ್ನ ಕಣ್ಣುಗಳನ್ನು ದೊಡ್ಡದಾಗಿ ಅರಳಿಸುತ್ತಾ ಇಲಿಯ ಚಲವಲನವೆಲ್ಲ ಗಮನಿಸಿ ಇಲಿ ಯಾವ ಸಮಯಕ್ಕೆ ಮೈ ಮರೆತು ನಿಲ್ಲುತ್ತದೋ ಆಗ ಹಾರಿ ಬೇಟೆಯಾಡಿ ತಿನ್ನಬೇಕು. ಗಿಡುಗನಿಗೆ ಇಲಿ ಒಂದು ಸಂಜೀವಿನಿಯ ಹಾಗೆ ಗೋಚರಿಸತೊಡಗಿತು.ಈ ಅವಕಾಶ ತಪ್ಪಿ ಹೋದರೆ ತನಗೆ ಉಳಿಗಾಲ ಇಲ್ಲ ಎಂಬುದು ಗಿಡುಗನಿಗೆ ಅರಿವಾಗಿ ತನ್ನ ಬೇಟೆ ತಪ್ಪಿಸಿಕೊಳ್ಳದ ಹಾಗೆ ಎಚ್ಚರ ವಹಿಸಿತು.ರೆಕ್ಕೆಯನ್ನೊಮ್ಮೆ ಅಗಲಿಸಿ ಬಲವಿದೆಯೋ ಇಲ್ಲವೋ ಎಂಬ ಪರೀಕ್ಷೆ ಯನ್ನೂ ಮಾಡಿತು ಪರವಾಗಿಲ್ಲ ಹಾರಬಹುದು ಇಲಿ ಬಹಳಷ್ಟು ದೂರದಲ್ಲೇನು ಇಲ್ಲ ಎಂಬ ಅರಿವಾದಾಗ ಒಮ್ಮೆಲೇ ಹಾರಿ ತಿನ್ನುವುದರಲ್ಲೇ ಮಗ್ನ ವಾಗಿದ್ದ ಇಲಿಯ ಮೇಲೆ ಎರಗಿತು.

ತನ್ನ ಮೇಲಾದ ಅಚಾನಕ್ ದಾಳಿಯಿಂದಾಗಿ ಏನು ಮಾಡಬೇಕು ಎಂದು ತೋಚದ ಇಲಿ ಅಲ್ಲೇ ಸ್ತಬ್ಧ ವಾಗಿತ್ತು. ಗಿಡುಗ ನ ಅದೃಷ್ಟವೋ ಏನೋ ಇಳಿಯು ತನ್ನ ಕಾಲ ಬೆರಳುಗಳ ಮಧ್ಯೆ ಸರಿಯಾಗಿ ಸಿಕ್ಕಿತ್ತು. ಗಿಡುಗ ನ ಉಗುರು ಚುಚ್ಚಿದ ಕ್ಷಣಕ್ಕೆ ಎಚ್ಚೆತ್ತ ಇಲಿ ಜೋರಾಗಿ ಚೀರಲು ಶುರು ಮಾಡಿತು ಹಾಗೂ ಪ್ರಾಣ ಭಯದಿಂದ ತಪ್ಪಿಸಿಕೊಳ್ಳಲು ಒದ್ದಾಟ ಶುರು ಮಾಡಿತು. ಗಿಡುಗನೂ ಎಲ್ಲಿ ತನ್ನ ಆಹಾರ ತಪ್ಪಿ ಹೋಗುವುದೆಂದು ಇದ್ದ ಅಲ್ಪ ಶಕ್ತಿ ಬಳಸಿ ಜೋರಾಗಿ ಇಲಿಯನ್ನು ಹಿಡಿದು ಇನ್ನೇನು ಹಾರಬೇಕು ಅಷ್ಟರಲ್ಲಿ ಅಲ್ಲೆ ಪಕ್ಕದಲ್ಲಿದ್ದ ಕೆಲಸ ಮಾಡುತಿದ್ದ ಒಬ್ಬ ವ್ಯಕ್ತಿ ಅದೇನು ಸದ್ದು? ಎಂದು ನೋಡಲು ಬಂದ. ನೋಡಿದರೆ ಗಿಡುಗ ಒಂದು ಇಲಿಯನ್ನು ತಿನ್ನಲು ಪ್ರಯತ್ನಿಸುತ್ತಿತ್ತು. ಅದನ್ನು ತಪ್ಪಿಸಲು ಕೈ ಎತ್ತಿದವನೆ ಸುಮ್ಮನಾದ.
ರಾಜ ಈಗ ಹೇಳು ಅಲ್ಲಿಗೆ ಬಂದ ಆ ವ್ಯಕ್ತಿ ಯಾರ ಜೀವ ಉಳಿಸಬೇಕು?. ಹಸಿವಿನಿಂದ ಸಾವಿನ ಸನಿಹದಲ್ಲಿರುವ ಗಿಡುಗನಿಗೆ ಇಲಿಯನ್ನು ತಿನ್ನಲು ಬಿಟ್ಟು ಗಿಡುಗನ ಜೀವ ಉಳಿಸಬೇಕಾ ಅಥವಾ ಏನು ತಪ್ಪು ಮಾಡದೇ ತನ್ನಷ್ಟಕ್ಕೆ ಜೀವಿಸುತ್ತಿದ್ದ ಇಲಿಯ ಜೀವ ಉಳಿಸಬೇಕೋ? ಸರಿಯಾದ ಉತ್ತರ ಹೇಳದಿದ್ದರೆ ತಲೆ ಒಡೆದು ನೂರು ಚುರುಗಳಾಗುವುದು ಎಂದು ನಕ್ಕಿದ್ದ ಬೇತಾಳ.ಉತ್ತರ ನಿಮ್ಮಿಂದಲೇ ಆಶಿಸುತ್ತೇನೆ..