ಅಂದು 2016 ನೇ ಇಸವಿ ಜೂಲೈ ತಿಂಗಳ 28 ನೆ ತಾರೀಖು, ಕಲ್ಲುಗುಡ್ಡ ಸಮೀಪದ ಕೆಂಜಾಲು ಎಂಬ ಊರಿನಲ್ಲಿ ಸುಮಾರು ರಾತ್ರಿ 8 ಗಂಟೆಯಾಗಿರಬಹುದು, ಗುಡುಗು ಮಿಂಚಿನ ಧಾರಕಾರ ಮಳೆಯಾಗುತಿತ್ತು, ಬಿಟ್ಟು ಬಿಡದೆ ಮಳೆ ಜೋರಾಗಿ ಸುರಿಯುತ್ತಲೇ ಇರುವ ಮಧ್ಯೆ ಒಬ್ಬಳು ಹೆಂಗಸು ಜೋರಾಗಿ ಅಳುತ್ತಾ ಓಡಿಬರುವ ಸದ್ದು ಶಂಕ್ರಪ್ಪನ ಮನೆ ಹತ್ತಿರ ಕೇಳಿಸುತ್ತಿತ್ತು. ಆಗಷ್ಟೇ ಮನೆ ಸೇರಿದ್ದ ಶಂಕ್ರಪ್ಪ ಚಳಿ ಕಾಯಿಸಲು ಒಲೆಯ ಮುಂದೆ ಕೂತಿದ್ದ ಇವನ ಕಿವಿಗಳಿಗೆ ಹೆಂಗಸೊಬ್ಬಳು ಜೋರಾಗಿ ಬೊಬ್ಬೆ ಹಾಕುತ್ತಾ ಬರುತ್ತಿರುವುದು ಕೇಳಿಸಿತು. ಯಾರೆಂದು ನೋಡಲು ಶಂಕ್ರಪ್ಪ ಮನೆಯಿಂದ ಹೊರಗೆ ಬಂದ ಅವನಿಗೆ ಏನು ಕಾಣಲಿಲ್ಲ, ಸುತ್ತಲೂ ಕತ್ತಲೆ, ಆಗಾಗ ಬರುತ್ತಿದ್ದ ಮಿಂಚಿನ ಬೆಳಕಿಗೆ ಏನು ಕಾಣುತ್ತಿರಲಿಲ್ಲ, ಮಳೆಯ ಸದ್ದು ಬಿಟ್ಟರೆ ಹೆಂಗಸು ಕೂಗುವ ದ್ವನಿ ಹತ್ತಿರಾಗುತ್ತಲೇ ಇತ್ತು.

“ಯಾರ್ರೀ.. ಅದು? “

ಎಂದು ಕೇಳಿದ್ದಳು ಶಂಕ್ರಪ್ಪ ನ ಹೆಂಡತಿ.

“ಗೊತ್ತಿಲ್ಲ.. “

ಎಂದು ಶಂಕ್ರಪ್ಪ ಇನ್ನೇನು ಮನೆ ಒಳಗೆ ಬರಬೇಕು ಅಷ್ಟರಲ್ಲಿ ಗೇಟ್ ನ ಬಳಿ ಒಬ್ಬಳು ಹೆಂಗಸು ಕೂದಲು ಕೆದರಿಕೊಂಡು ಜೋರಾಗಿ ಬೊಬ್ಬೆ ಇಡುತ್ತಾ ನಿಂತಿರುವುದು ಮಿಂಚಿನ ಬೆಳಕಿನಲ್ಲಿ ಕಂಡ ಶಂಕ್ರಪ್ಪನಿಗೆ ಒಂದು ಕ್ಷಣ ಜೀವವೇ ಬಾಯಿಗೆ ಬಂದ ಹಾಗಾಗಿತ್ತು, ಒಳಗೆ ಓಡಲು ನೋಡುವ ಹೊತ್ತಿಗೆ,

“ಅಣ್ಣಾ…”

ಎಂದು ಜೋರಾಗಿ ಆ ಹೆಂಗಸು ಕರೆದಳು.

“ಎಲಾ ಇದ್ಯಾರಿದು .. ? “

ಎಂದು ಶಂಕ್ರಪ್ಪ ಸ್ವಲ್ಪ ಧೈರ್ಯ ಮಾಡಿ ಆ ಹೆಂಗಸಿನ ಬಳಿ ಹೋಗಿ ನೋಡಿದರೆ ಅದು ಸಾವಿತ್ರಮ್ಮ.

“ಏನಮ್ಮಾ ? ಏನಾಯ್ತು?”

ಎಂದು ವಿಚಾರಿಸಿದಾಗ,

“ಅಣ್ಣಾ .. ನಮ್ಮನೆಯವ್ರು ಇವತ್ತು ಸಂಜೆ ಬಾಳ ಜಗಳ ಮಾಡಿದ್ರು ನನ್ ಹತ್ರ. ಮಕ್ಕಳಿಗೂ ಹೊಡೆದ್ರು. ಈಗ ನೋಡಿದ್ರೆ ಮನೆ ಬಿಟ್ಟು ಹೋಗಿದ್ದಾರೆ. ದಯವಿಟ್ಟು ಸ್ವಲ್ಪ ಎಲ್ಲಿ ಹೋಗಿದಾರೆ ಅಂತ ತಿಳ್ಕೊಂಡು ಹೇಳಿ.”

ಅಂದಳು ಸಾವಿತ್ರಮ್ಮ.

“ಈ ಮಳೇಲಿ ಎಲ್ ಹೋಗ್ತಾನೆ.. ಬರ್ತಾನೆ ಹೋಗು.”

ಎಂದು ಶಂಕ್ರಪ್ಪ ಮನೆ ಒಳಗೆ ಹೋಗಲು ತಿರುಗಿದ

“ಇಲ್ಲ ಅಣ್ಣ.. ಅದೇನೋ ಸಾಯ್ತೀನಿ ಅಂತೆಲ್ಲ ಹೇಳ್ತಿದ್ರು ಅಧ್ಕೆ ಭಯ. ಊಟ ಹಾಕಿಕೊಡೋಕೆ ಅಂತ ಒಳಗೆ ಹೋಗಿ ಹೊರಗೆ ಬರೋ ಅಷ್ಟರಲ್ಲಿ ಅವರಿಲ್ಲ.”

ಅಂದಳು

ಈ ಬಡ್ಡಿ ಮಗ ರಂಗ ಇನ್ನೆಲ್ಲಿ ಗಂಧ ಕಡಿಯೋಕೆ ಹೋಗಿದನೋ ಏನೋ. ಈ ಮಳೇಲಿ ಒಳ್ಳೆ ಸಮಯ ಬೇರೆ ಯಾರ್ಗೂ ಗೊತ್ತಾಗಲ್ಲ. ಇವ್ಳು ಸುಮ್ಮನೆ ಬಂದು ಇಲ್ಲಿ ಗೋಳಾಡ್ತ ಇದ್ದಾಳೆ. ಎಂದು ಶಂಕ್ರಪ್ಪ ಸಾವಿತ್ರಮ್ಮ ನ ಗಂಡ ರಂಗನ ಪೂರ್ವಾಪರ ತಿಳಿದಿದ್ದರಿಂದ ಮನಸಿನಲ್ಲೇ ಗೊಣಗುತ್ತ
“ಬರ್ತಾನೆ ಹೋಗಮ್ಮ”ಎಂದ.

“ಅಣ್ಣಾ.. ದಯವಿಟ್ಟು ಬನ್ನಿ”

ಎಂದು ಜೋರಾಗಿ ಅಳತೊಡಗಿದಳು.
ಇವಳ ಕಾಟ ತಡೆಯೋಕೆ ಆಗದೆ ಶಂಕ್ರಪ್ಪ “ತಡಿಯಮ್ಮ ಬರ್ತೀನಿ” ಎಂದು ಹೆಂಡತಿಗೆ ವಿಷಯ ತಿಳಿಸಿ ಒಂದು ಟಾರ್ಚ್ ಹಿಡಿದು ಸಾವಿತ್ರಮ್ಮನೊಂದಿಗೆ ಹೊರಟ.

ಶಂಕ್ರಪ್ಪ ಒಂದು ಕೊಡೆ ಹಿಡಿದು ಟಾರ್ಚ್ ಹಾಕುತ್ತಾ ಮುಂದೆ ಸಾಗಿದ ಸಾವಿತ್ರಮ್ಮ ಅಳುತ್ತಾ ಹಿಂಬಾಲಿಸುತ್ತಿದ್ದಳು. ದಟ್ಟ ಕತ್ತಲು, ಜೋರಾದ ಮಳೆಯ ಸದ್ದು, ಗುಡುಗು ಮಿಂಚಿನ ಸದ್ದು, ಜಲ್.. ಜಲ್.. ಗೆಜ್ಜೆಯ ಸದ್ದು ಕೇಳಿಸುತ್ತಿತ್ತು. ಶಂಕ್ರಪ್ಪನ ಧೈರ್ಯ ದಿಕ್ಕಾಪಾಲಾಗಿ ಓಡುವ ಹಾಗೆ ಮಾಡಿತ್ತು ಸನ್ನಿವೇಶ. ಒಮ್ಮೆಲೇ ನಿಂತ ಶಂಕ್ರಪ್ಪ.

ಆ ಗೆಜ್ಜೆಯ ಸದ್ದು ಏನು ಎಂದು ಗಮನವಿಟ್ಟು ಕೇಳಿಸಿಕೊಂಡ. ಅದು ಸಾವಿತ್ರಮ್ಮ ನ ಕಾಲ್ಗೆಜ್ಜೆಯ ಸದ್ದು ಎಂದು ತಿಳಿದು, ಶಂಕ್ರಪ್ಪ ಈ ಹೆಂಗಸನ್ನು ಇಷ್ಟು ಹೊತ್ತಿನಲ್ಲಿ ನನ್ನ ಜೊತೆ ಕರೆದುಕೊಂಡು ಹೋಗುವುದು ಸರಿಯಲ್ಲ ಅದು ಕೂಡ ಈ ಹೆಂಗಸು ಅಳುತ್ತಾ ಬರುತ್ತಿದೆ ನೋಡಿದವರು ಏನ್ ತಿಳ್ಕೊಳಲ್ಲ ಅಂತ ಯೋಚಿಸಿದ ಶಂಕ್ರಪ್ಪ.

“ನೀನು ಮನೆಗೆ ಹೊಗಮ್ಮ. ಮಕ್ಳು ಬೇರೆ ಸಣ್ಣವು . ನಾನ್ ಹುಡುಕಿಕೊಂಡು ಬರ್ತೀನಿ” ಅಂದ..

ಆ ಹೆಂಗಸು ಅಳುತ್ತಲೇ ಅವಳ ಮನೆ ಕಡೆಗೆ ಹೊರಟಳು.

ಶಂಕ್ರಪ್ಪ.. ಟಾರ್ಚ್ ಹಾಕಿಕೊಂಡು ಮುಂದೆ ಸಾಗಿದ.

ಈ ಬಡ್ಡಿ ಮಗನ್ನ ಎಲ್ಲಿ ಅಂತ ಹುಡ್ಕೋದು? ಎನ್ನುತ್ತ ಶಂಕ್ರಪ್ಪ ಸಾವಿತ್ರಮ್ಮ ನ ಮನೆಯಿಂದ ಸ್ವಲ್ಪ ದೂರದಲ್ಲಿ ಇದ್ದ ಒಂದು ಸಣ್ಣ ಮೋರಿ ಕಟ್ಟೆಯಲ್ಲಿ ಕುಳಿತ. ಗುಡ್ಡದಿಂದ ಬರುವ ನೀರು ಹೋಗಲು ಮಾಡಿದ್ದ ಚರಂಡಿಯ ಮಣ್ಣು ಕೊರೆದು ಅದು ದೊಡ್ಡ ಹಳ್ಳದ ರೀತಿಯಾಗಿತ್ತು ಅದಕ್ಕೆ ಅಡ್ಡಲಾಗಿ ಕಟ್ಟಿದ್ದ ಮೋರಿಯ ಮೇಲೆ ಕುಳಿತಿದ್ದ ಶಂಕ್ರಪ್ಪ. ಮಳೆ ನೀರು ಹರಿಯುವ ಸದ್ದು ಶಂಕ್ರಪ್ಪನ ಯೋಚನೆಯ ನಿರ್ದಿಷ್ಟತೆಯನ್ನು ತಪ್ಪಿಸುತ್ತಿತ್ತು.

“ಎಲ್ಲಿ ಹೋಗಿ ಸತ್ನೋ.. “

ಎನ್ನುತ್ತಾ ಬೀಡಿ ಹಚ್ಚಿದ್ದ. ಶಂಕ್ರಪ್ಪನ ಮುಂದೆ ಒಂದು ಬೃಹದಾಕಾರದ ಹಲಸಿನ ಮರ ಮಿಂಚಿನ ಬೆಳಕಿಗೆ ಒಮ್ಮೆ ಕಾಣಿಸಿಕೊಂಡು ಮರೆಯಾಗುತಿತ್ತು. ಅದನ್ನೇ ದಿಟ್ಟಿಸಿ ನೋಡುತ್ತಿದ್ದ, ಮತ್ತೊಮ್ಮೆ ಬಂದ ಮಿಂಚಿನ ಬೆಳಕಿಗೆ ಹಲಸಿನ ಮರದ ಪಕ್ಕದಲ್ಲಿದ್ದ ಇನ್ನೊಂದು ಮರದ ಕೊಂಬೆಗೆ ಒಂದು ತಲೆ ಬುರುಡೆ ನೇತು ಹಾಕಿರುವ ಹಾಗೆ ಕಾಣಿಸಿದಂತಾಯಿತು.
” ಭ್ರಮೆ. ” ಅಂದುಕೊಂಡ ಶಂಕ್ರಪ್ಪ ಆ ಕಡೆಗೆ ಟಾರ್ಚ್ ಹಾಕುವ ಮನಸ್ಸು ಮಾಡಲಿಲ್ಲ.
ಇನ್ನೊಂದು ಬಾರಿ ಜೋರಾಗಿ ಬಂದ ಮಿಂಚಿನ ಬೆಳಕಿಗೆ ನೇಣು ಹಾಕಿಕೊಂಡು ನಾಲಿಗೆ ಹೊರಗೆ ಚಾಚಿದ ಸ್ಥಿತಿಯಲ್ಲಿದ್ದ ಒಂದು ಶವ ಶಂಕ್ರಪ್ಪನ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸಿದ ಕ್ಷಣಕ್ಕೆ “ಅಮ್ಮಾ…….” ಎಂದು ಜೋರಾಗಿ ಬೊಬ್ಬೆ ಹಾಕಿದ್ದ ಶಂಕ್ರಪ್ಪ ಅಲ್ಲಿಂದ ಸೀದಾ ಅಲ್ಲೇ ಪಕ್ಕದಲ್ಲಿದ್ದ ತನ್ನ ಸಂಬಂಧಿಕರ ಮನೆಗೆ ಓಡಿದ.

ನಡೆದ ಘಟನೆ ಎಲ್ಲಾ ಅವರಿಗೆ ತಿಳಿಸಿ ಸ್ವಲ್ಪ ಜನರನ್ನು ಸೇರಿಸಿಕೊಂಡು ಆ ಮರದ ಬಳಿಗೆ ಬಂದ ಶಂಕ್ರಪ್ಪನಿಗೆ ಅದು ರಂಗನ ಶವವೇ ಎಂದು ಖಾತ್ರಿಯಾಗಿತ್ತು. ಅಷ್ಟು ಹೊತ್ತಿಗೆ ಒಮ್ಮೆ ಜೋರಾಗಿ ಸುರಿದ ಮಳೆ ತನ್ನ ಗದ್ದಲವನ್ನು ನಿಲ್ಲಿಸಿತ್ತು. ಇಬ್ಬರು ವಿಷಯ ತಿಳಿಸಲು ಸಾವಿತ್ರಮ್ಮನ ಮನೆ ಕಡೆ ಓಡಿದರೆ, ಇನ್ನಿಬ್ಬರು ಪೊಲೀಸ್ ಸ್ಟೇಶನ್ಗೆ ಫೋನ್ ಮಾಡಲು ಹೋದರು.

ಸ್ವಲ್ಪ ಹೊತ್ತಿನಲ್ಲೇ ಬಂದ ಸಾವಿತ್ರಮ್ಮನ ಗೋಳಾಟ ನೋಡಲು ಸಾಧ್ಯವಿರಲಿಲ್ಲ. ಆ ಪುಟ್ಟ ಮಕ್ಕಳು ಏನು ಅರಿಯದೆ ಸುಮ್ಮನೆ ನಿಂತಿದ್ದವು. ಪೊಲೀಸರ ಆಗಮನವು ಆಯಿತು ಶವವನ್ನು ಕೆಳಗೆ ಇಳಿಸಿ ಮಹಜರು ಮಾಡಿಕೊಳ್ಳುತ್ತಿದ್ದರು. ಆ ಸ್ಥಳಕ್ಕೆ ಜನರ ದಂಡೇ ಬರತೊಡಗಿತು.

ಜನರ ನಡುವೆ ಗುಸು ಗುಸು ಮಾತುಗಳು ಶುರುವಾದವು. ಒಬ್ಬೊಬ್ಬರದು ಒಂದೊಂದು ವಾದ.

ಒಬ್ಬ , “ಈ ರಂಗ ತುಂಬಾ ಸಾಲ ಮಾಡ್ಕೊಂಡಿದ್ದ. ಆ ತಲೆ ಬಿಸಿಲೆ ಹಿಂಗ್ ಮಾಡ್ಕೊಂಡಿರ್ಬೇಕು.” ಅಂತ ವಾದಿಸಿದರೆ,
ಇನ್ನೊಬ್ಬ, “ಏ ನಿಂಗ್ ಗೊತ್ತಿಲ್ಲ ಅವನದು ಗಂಧದ ದಂಧೆ. ಯಾರ್ ಯಾರ್ ಮನೆ ಜಾಗಕ್ಕೆ ನುಗ್ಗಿ ಗಂಧ ಕದ್ಧಿದಾನೋ ಆ ಜಾಗದ್ ಚೌಡಿ ಸುಮ್ಮನೆ ಬಿಡುತ್ತಾ ಇವ್ನ. ಅಲ್ಲಾ ಗಂಧದ ವಿಷಯದಲ್ಲಿ ಎಲ್ಲಿ ಜಗಳ ಆಗಿತ್ತೋ ಏನೋ. ಈ ಗಂಧ ಕದಿಯೋರ ಕಥೆ ಇಷ್ಟೇ ಎಷ್ಟು ಜನಾನ ನೋಡಿಲ್ಲ ನಾನು.” ಅಂತ ವಾದಿಸಿದರೆ,

ಮತ್ತೊಬ್ಬನದು ಬೇರೆಯೇ ಕಥೆ.
” ಅದೆಲ್ಲಾ ಏನು ಅಲ್ಲ.. ಇಲ್ಲಿ ಬೊಬ್ಬೆ ಹಾಕುತಿದ್ದಳಲ್ಲ ಅವ್ನ ಹೆಂಡ್ತಿ ಸಾವಿತ್ರಮ್ಮ ಅವಳ ನಡತೆ ಸರಿ ಇರ್ಲಿಲ್ಲ. ಅವ್ಳಿಗೆ ಪಕ್ಕದ ಊರಿನ ಒಬ್ಬನ ಜೊತೆ ಸಂಬಂಧ ಇತ್ತಂತೆ. ಈ ವಿಷಯ ರಂಗನಿಗೆ ಗೊತ್ತಾಗಿ ಸುಮಾರ್ ದಿನದಿಂದ ಅವರ ಮನೇಲಿ ದಿನಾ ಜಗಳ ಅಂತೆ. ರಂಗ ಕುಡ್ಕೊಂಡು ಬಂದು ಹೆಂಡ್ತಿಗೆ ಸಮಾ ಹೊಡೀತಿದ್ದ ಅಂತೆ. ಪೆಟ್ಟು ತಿನ್ನೋಕೆ ಆಗ್ದೆ ಇವ್ಳು ಇವತ್ತು ಪಕ್ಕದ ಊರಿನ ತನ್ನ ಪ್ರಿಯತಮ ನನ್ನು ಕರೆಸಿ ರಂಗನಿಗೆ ಹೊಡೆದು ಸಾಯಿಸಿ ಇಲ್ಲಿ ತಂದು ನೇತಾಕಿದಾರೆ ಅಂತ ಸುದ್ದಿ. ಯಾರೋ ಹೇಳಿದ್ನ ಕೇಳಿಸಿಕೊಂಡೆ ನಂಗೂ ಸರಿ ಗೊತ್ತಿಲ್ಲ.” ಎಂದು ವಾದಿಸಿದ್ದ.

ಎಲ್ಲರದೂ ಒಂದೊಂದು ವಾದ. ಇದರಲ್ಲಿ ಕೆಲವು ನಿಜವೂ ಇರಬಹುದು , ಇನ್ನು ಕೆಲವು ಕಾಲ್ಪನಿಕ ಕತೆಯಾಗಿರಬಹುದು. ವಾಸ್ತವ ತಿಳಿದವನಿಗಷ್ಟೇ ಸತ್ಯದ ಅರಿವು ಹೀಗಾಗಿ ರಂಗನ ಸಾವಿಗೆ ಒಂದು ತಾರ್ಕಿಕ ಅಂತ್ಯವೇ ಸಿಗಲಿಲ್ಲ.
ರಂಗ ಇವರ ಯಾವ ತರ್ಕವನ್ನು ಆಲಿಸದ ಲೋಕವನ್ನು ಸೇರಿದ್ದ. ಹೆಂಡತಿ ಮಕ್ಕಳು ಅನಾತರಾಗಿದ್ದರು. ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕೇಸ್ ಕ್ಲೋಸ್ ಮಾಡಿದ್ದರು.

Leave a Reply

Your email address will not be published. Required fields are marked *

Back